ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀರಿನ ಸಮಸ್ಯೆ: ಗಂಭೀರ ಚರ್ಚೆ

Mainashree
Updated On : 21 Mar 2013, 11:39 am

ಸವಣೂರು: ಬರಗಾಲದ ಬಿರು ಬಿಸಿಲಿನೊಂದಿಗೆ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಸವಣೂರ ತಾಲೂಕಿನ ಸಮಸ್ಯೆ ಬಗೆಹರಿಸುವ ಕುರಿತು ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳೊಂದಿಗೆ ಪ್ರತಿಯೊಂದು ಗ್ರಾಮದ ಸ್ಥಿತಿ-ಗತಿಗಳನ್ನು ಸಭೆ ಪರಿಶೀಲಿಸಿತು. ಮುಂದಿನ ಎರಡು ತಿಂಗಳ ಅವಧಿ ಅತ್ಯಂತ ಗಂಭೀರವಾಗಿದೆ. ಹಲವಾರು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೊಸ ಕೊಳವೆಬಾವಿಗಳೂ ವಿಫಲವಾಗುತ್ತಿವೆ. ಈ ಹಂತದಲ್ಲಿ ಗ್ರಾಮ ಪಂಚಾಯಿತಿಗಳು, ಸಾರ್ವಜನಿಕರು ಪರಸ್ಪರ ಸಹಯೋಗದೊಂದಿಗೆ ನೀರಿನ ಕೊರತೆ ಬಗೆಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಶಿರಬಡಗಿ ಹಾಗೂ ಕಾರಡಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಯಲವಿಗಿ ಗ್ರಾಮದ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ. ಕಡಕೋಳ ಹಾಗೂ ಕಲಿವಾಳ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆಗಳಿವೆ. ಮಾದಾಪುರ ಹಾಗೂ ಕಾರಡಗಿ ಗ್ರಾಮಗಳ ಮಧ್ಯ ನೀರಿಗಾಗಿ ಕಲಹವಾಗುವ ಸಾಧ್ಯತೆಯೂ ಇದೆ ಎಂಬ ಅಂಶ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಕೊಳವೆಬಾವಿಗಳ ಸಮರ್ಪಕ ನಿರ್ವಹಣೆ ಇಲ್ಲದೆ ನೀರಿನ ಸಮಸ್ಯೆ ಹೆಚ್ಚಳವಾಗುತ್ತಿರುವುದೂ ಚರ್ಚೆಗೆ ಒಳಗಾಯಿತು.
ಸವಣೂರ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರತೆ ಪಡೆದಿದ್ದು, ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯಲ್ಲಿ ಗಡಸು ನೀರಿನ ಲಭ್ಯತೆ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಕಲಿವಾಳ, ಕೃಷ್ಣಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಸಾಧ್ಯತೆಗಳನ್ನು ನಿರಾಕರಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಗ್ರಾಮಗಳ 10 ಕಿಮೀ ವ್ಯಾಪ್ತಿಯ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂಬ ಸೂಚನೆಯನ್ನು ಸಭೆ ನೀಡಿತು.
ಕಳಪೆ ಆಹಾರ ಪೂರೈಕೆ:  ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ. ದಾಸ್ತಾನು ಪುಸ್ತಕ ನಿರ್ವಹಣೆ ಅಸಮರ್ಪಕವಾಗಿದೆ. ಮೇಲ್ವಿಚಾರಕರೂ ಸರಿಯಾಗಿ ಭೇಟಿ ನೀಡುತ್ತಿಲ್ಲ. ಸಹಾಯಕಿಯರೇ ಅಂಗನವಾಡಿ ಕೇಂದ್ರಗಳನ್ನು ನಿರ್ವಹಿಸುತ್ತಾರೆ ಎಂಬ ದೂರು ಮರುಕಳಿಸಿತು. ಸರ್ಕಾರದ ಯೋಜನೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಾಗುತ್ತಿಲ್ಲ ಎಂಬ ಆಕ್ಷೇಪಣೆ ವ್ಯಕ್ತವಾಯಿತು.
ರೇಷ್ಮೆ ಬೆಳೆಗಾರರಿಗೆ ರು. 5 ಲಕ್ಷ ಸಹಾಯಧನ ನೀಡಲಾಗಿದೆ ಎಂದು ರೇಷ್ಮೆ ಅಧಿಕಾರಿಗಳು ವಿವರಿಸಿದರು. ಸರ್ಕಾರದ ಪಿಂಚಣಿ ಯೋಜನೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಬೇಕು. ಶಾಲಾ ಆವರಣದಲ್ಲಿ ನುಗ್ಗೆ-ನೆಲ್ಲಿ ಮೊದಲಾದ ಗಿಡಗಳನ್ನು ಬೆಳೆಸಬೇಕು. ನಿಧಾನಗತಿಯಲ್ಲಿರುವ ಗೋಕಾಕ ಭವನ ನಿರ್ಮಾಣಕ್ಕೆ ವೇಗ ನೀಡಿ ಪೂರ್ಣಗೊಳಿಸಬೇಕು. ಅಪೂರ್ಣ ಹಂತದಲ್ಲಿರುವ ಪಿಎಂಜಿಎಸ್‌ವೈ ಯೋಜನೆಯ ತೊಂಡೂರ-ಕಳಸೂರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಭೆ ಸೂಚಿಸಿತು. ಈ ರಸ್ತೆ ಕಾಮಗಾರಿ 5 ವರ್ಷಗಳಿಂದ ನಡೆಯುತ್ತಿದೆ. ಪಂಚವಾರ್ಷಿಕ ಯೋಜನೆಯನ್ನೂ ಮೀರಿದೆ ಎಂದು ಅಧ್ಯಕ್ಷರು ಟೀಕಿಸಿದರು.
ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ನಿಯಂತ್ರಣ, ನೈರ್ಮಲ್ಯ ಕಾಯ್ದುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಗಟ್ಟಬೇಕು ಎಂದು ಸೂಚಿಸಲಾಯಿತು. ಟಿಎಸ್‌ಪಿ ಯೋಜನೆಯಡಿ ಕೃಷಿ ಉಪಕರಣ ಪೂರೈಕೆಗೆ ರು. 6 ಸಾವಿರ ಮಾತ್ರ ನಿಗದಿಯಾಗಿರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ತಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಖೈರುನ್ನಿಸಾ ಮೋಮಿನ, ತಾಪಂ ಇಓ ಎಸ್.ಆರ್. ಪಾಟೀಲ ಉಪಸ್ಥಿತರಿದ್ದರು. ರಾಜು ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement