ಪಿಕಾರ್ಡ್ ಬ್ಯಾಂಕ್ ಸಾಲ ಮನ್ನಾಗೆ 34 ರೈತರ ಮನವಿ
ಹಿರೇಕೆರೂರು: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ತಾಲೂಕಿನ 34 ರೈತರ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ಸದಸ್ಯರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರರಿಗೆ ಆಗ್ರಹಿಸಿದರು. ರೈತ ಸಂಘದ ತಾಲೂಕಾಧ್ಯಕ್ಷ ಆರ್.ಕೆ. ದೂದಿಹಳ್ಳಿ ಮಾತನಾಡಿ, 2004-05ನೇ ಸಾಲಿನಲ್ಲಿ 34 ರೈತರು ಸಾಲ ಪಡೆದಿದ್ದು, ಮರುಪಾವತಿ ಮಾಡಿಲ್ಲ. ಬರಗಾಲದಿಂದ ಬೆಂದ ರೈತರು ಸಾಲ ಮರುಪಾವತಿಸದೆ ಕಂಗಾಲಾಗಿದ್ದಾರೆ. 34 ರೈತರು ಕಟ್ ಬಾಕಿದಾರರಾಗಿದ್ದು, ವಸೂಲಿಗಾಗಿ ಬ್ಯಾಂಕ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಕೋರ್ಟಿಗೆ ಅಲೆದಾಡಿ ಸೋತಿದ್ದಾರೆ. ಪಿಎಲ್‌ಡಿ ಬ್ಯಾಂಕ್ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾಲದ ಅಸಲು, ಬಡ್ಡಿಮನ್ನಾ ಮಾಡುವ ಮೂಲಕ ರೈತರನ್ನು ಸಾಲದ ಬಾಧೆಯಿಂದ ಮುಕ್ತರನ್ನಾಗಿಸಬೇಕೆಂದು ಆಗ್ರಹಿಸಿದ್ದಾರೆ. ಮನವಿಯನ್ನು ಬ್ಯಾಂಕ್ ಅಧ್ಯಕ್ಷ ಎಂ.ವಿ. ಹೊಂಬರಡಿ ಅವರಿಗೆ ಸಲ್ಲಿಸಿದರು.