ಹಾನಗಲ್ಲ-ತಡಸ ಹೆದ್ದಾರಿ ಕಾಮಗಾರಿ ಶೀಘ್ರ: ಉದಾಸಿ
ಹಾನಗಲ್ಲ: ಹಾನಗಲ್ಲ-ತಡಸ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ರು. 104 ಕೋಟಿಗಳಲ್ಲಿ ಮರು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಲೋಕೋಪಯೋಗಿ ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ-ಹಾನಗಲ್ಲ ರಸ್ತೆ ಕಾಮಗಾರಿ ರು. 84 ಕೋಟಿಗೆ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರು ನಿಯೋಜನೆಗೊಂಡಿದ್ದಾರೆ. ಒಟ್ಟು 76 ಕಿ.ಮೀ. ರಸ್ತೆ ಕಾಮಗಾರಿಗಳಲ್ಲಿ ಹಾವೇರಿ-ಹಾನಗಲ್ಲ ರಸ್ತೆ ಕಾಮಗಾರಿ ಆರಂಭಗೊಂಡಿದೆ. ತಿಂಗಳಿಗೆ 6 ಕಿ.ಮೀ. ರಸ್ತೆ ನಿರ್ಮಾಣಗೊಳ್ಳಲಿದೆ. ಇತ್ತೀಚೆಗೆ ಇದೇ ಕಾಮಗಾರಿಗೆ ರು. 122 ಕೋಟಿಗೆ ಟೆಂಡರ್ ಕರೆದು, ಕಾಮಗಾರಿಯೂ ಪ್ರಾರಂಭಗೊಂಡಿತ್ತು. ಆದರೆ ಗುತ್ತಿಗೆದಾರರ ನಿರ್ವಹಣೆ ವ್ಯವಸ್ಥೆಯಲ್ಲಿ ವಿಳಂಬ ಧೋರಣೆ ತಾಳಿದ್ದರಿಂದ ಗುರಿ ಸಾಧಿಸಲಾಗಲಿಲ್ಲ. ಈ ನಡುವೆ ಈ ಕಾಮಗಾರಿಯನ್ನು ಮೂವರಿಗೆ ಮರುಗುತ್ತಿಗೆ ನೀಡಿದ್ದರೂ ವಿಳಂಬಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಹಾನಗಲ್ಲ-ಹಾವೇರಿ ರಸ್ತೆಯ ಸೇತುವೆ, ಸಿಡಿಗಳ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಉದಾಸಿ ವಿವರಿಸಿದರು.