ಅಧ್ಯಕ್ಷರಿಂದ ಅಧಿಕಾರಿಗಳ ತರಾಟೆ
ಹಾನಗಲ್ಲ: ಹೆಚ್ಚಿನ ದರಕ್ಕೆ ಪಡಿತರ ಸೀಮೆ ಎಣ್ಣೆ ಮಾರಾಟ, ಪಡಿತರ ಚೀಟಿ ಬದಲಾವಣೆಯಲ್ಲಿ ಅಕ್ರಮ, ದೋಷಪೂರಿತ ಪಡಿತರ ಚೀಟಿ ಸಮಸ್ಯೆ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿ ಇನ್ನಿತರ ಗಂಭೀರ ಸಮಸ್ಯೆಗಳು ತಾಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಆಹಾರ ಇಲಾಖೆ ಅಧಿಕಾರಿ ಎಸ್.ಜಿ. ಛತ್ರದ ಇಲಾಖೆಯ ಮಾಹಿತಿ ನೀಡಿ, ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಗ್ರಾಪಂ ಕಾರ್ಯಾಲಗಳಲ್ಲೂ ಈ ವ್ಯವಸ್ಥೆ ಒದಗಿಸಲಾಗಿದೆ.
ಅಧಿಕಾರಿ ತರಾಟೆಗೆ: ಇದರೊಂದಿಗೆ ದೋಷಪೂರಿತ ಕಾರ್ಡುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸುತ್ತಿದ್ದಂತೆ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಸಾರ್ವಜನಿಕರ ದೂರೊಂದನ್ನು ಸಭೆಯಲ್ಲಿ ಪ್ರದರ್ಶಿಸಿ, ಆಹಾರ ಇಲಾಖೆ ಕುರಿತು ತಾಲೂಕಾದ್ಯಂತ ದೂರುಗಳು ಬರುತ್ತಿವೆ. ಪಡಿತರ, ಸೀಮೆಎಣ್ಣೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣ ತಾಲೂಕಿನ ಕರಗುದರಿ ಗ್ರಾಮದಲ್ಲಿ ನಡೆಯುತ್ತಿದೆ. ಇದೇ ರೀತಿ ಹಲವು ಗ್ರಾಮಗಳಲ್ಲಿ ಈ ಕುರಿತು ದೂರುಗಳು ಬಂದಿವೆ. ಇದರಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಲೈಸೆನ್ಸ್ ರದ್ದುಗೊಳಿಸಿ: ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ಬಸವರಾಜ ಹಾದಿಮನಿ, ಇಂಥ ವ್ಯವಹಾರಗಳು ಅಧಿಕಾರಿಗಳ ಗಮನಕ್ಕೂ ಬಂದಿರಬಹುದು. ಈ ಬಗ್ಗೆ ಸಮರ್ಥನೆ ಬೇಡ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದರು. ಹೆಚ್ಚಿನ ಬೆಲೆಗೆ ಪಡಿತರ ಹಾಗೂ ಸೀಮೆಎಣ್ಣೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಅಂಥವರ ಲೈಸನ್ಸ್ ರದ್ದುಗೊಳಿಸಬೇಕೆಂದು ಒಕ್ಕೊರಲಿನಿಂದ ಸದಸ್ಯರು ಒತ್ತಾಯಿಸಿದರು.
ಠರಾವು ಮಂಡನೆ: ಜಿಪಂ ಸದಸ್ಯ ಮಹದೇವಪ್ಪ ಭಾಗಸರ ಮಾತನಾಡಿ, ಎಪಿಎಲ್ ಕಾರ್ಡುಗಳನ್ನು ಬಿಪಿಎಲ್ ಕಾರ್ಡುಗಳನ್ನಾಗಿ ಪರಿವರ್ತಿಸಲು ಭಾರಿ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಈ ಅವ್ಯವಹಾರಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದು, ಕೂಡಲೆ ಅವರನ್ನು ವರ್ಗಾವಣೆಗೊಳಿಸುವಂತೆ ಪಕ್ಷಾತೀತವಾಗಿ ಸದಸ್ಯರು ಆಗ್ರಹಿಸಿ ಠರಾವು ಮಂಡಿಸಿದರು.
ನೀರಿನ ಸಮಸ್ಯೆಗೆ ಕ್ರಮ: ಜಿಪಂ ಉಪ ವಿಭಾಗದ ಅಭಿಯಂತರ ಕೆ.ಆರ್. ಮಠದ ಇಲಾಖೆ ವಿವರ ನೀಡಿ, ತಾಲೂಕಿನ ಶೇ. 20 ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ರು. 60 ಲಕ್ಷದ ಕ್ರಿಯಾಯೋಜನೆ ರಚಿಸಿದ್ದು, ಸಮಸ್ಯೆಯಿರುವ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಕೊಳವೆ ಬಾವಿ, ಪೈಪ್‌ಲೈನ್ ಹಾಕುವ ಮೂಲಕ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ. ಬೇಸಿಗೆ ಕಾಲದ ಕುಡಿವ ನೀರಿನ ಸಮಸ್ಯೆ ನಿರ್ವಹಣೆಗಾಗಿ ತಹಸೀಲ್ದಾರರು, ತಾಪಂ ಇಓಗಳು, ತಾಪಂ ಅಧ್ಯಕ್ಷರನ್ನೊಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಿರ್ಮಿತಿ ಕೇಂದ್ರ ತಾಲೂಕಿನಲ್ಲಿ ನಡೆಸುತ್ತಿರುವ ಕಟ್ಟಡ ಕಾಮಗಾರಿಗಳೆಲ್ಲ ಕಳಪೆಯಾಗಿದ್ದು, ಈ ಕುರಿತು ನೀಡಿರುವ ದೂರುಗಳಿಗೆ ಇಲಾಖೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಇನ್ನು ಮುಂದೆ ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾಮಗಾರಿಗಳ ಗುತ್ತಿಗೆ ನೀಡಬಾರದೆಂದು ಸದಸ್ಯರು ಠರಾವು ಮಂಡಿಸಿದರು.
ನಿಗಾ ವಹಿಸಿ: ಎಚ್ಚರಿಕೆ: ತಾಲೂಕಿನಲ್ಲಿ ಅಪೂರ್ಣಗೊಂಡಿರುವ, ಮುಗಿಯುವ ಹಂತದಲ್ಲಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿದಲ್ಲಿ ಮಾತ್ರ ಹಣ ಬಿಡುಗಡೆಗೊಳಿಸಲಾಗುವುದು. ಇಲ್ಲದಿದ್ದಲ್ಲಿ ಹಣ ಬಿಡುಗಡೆಗೊಳಿಸುವುದಿಲ್ಲ ಎಂದು ತಾಪಂ ಅಧ್ಯಕ್ಷರು ಎಚ್ಚರಿಸಿದರು. ಯಾವುದೇ ಇಲಾಖೆ ಅನುದಾನ ಮಾ. 31ರೊಳಗೆ ಲ್ಯಾಪ್ಸ್ ಆಗದಂತೆ ನಿಗಾವಹಿಸಲು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಏ. 1ರಿಂದ 10ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ತಾಲೂಕಿನ 11 ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಗೊಳ್ಳಲು ಶಿಕ್ಷಕ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮ, ವಿಶೇಷ ತರಗತಿ ನಡೆಸಲಾಗಿದೆ ಎಂದು ವಿವರಿಸಿದ ಬಿಇಓ ವಿ.ವಿ. ಸಾಲಿಮಠ, ತಾಲೂಕಿನ 7ಅನುದಾನಿತ ಶಾಲೆಗಳ 54 ಶಿಕ್ಷಕರ ಮೂರು ತಿಂಗಳ ವೇತನ ಬಿಡುಗಡೆಗೊಂಡಿದ್ದು, ಬರುವ ದಿನಗಳಲ್ಲಿ ಸ್ಥಳೀಯ ತಾಪಂ ಕಾರ್ಯಾಲಯದಿಂದ ಅನುದಾನ ಬಿಡುಗಡೆಯಾಗುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗುತ್ತದೆ ಎಂದರು.
ತಾಲೂಕಿನ ಸರ್ಕಾರಿ ಶಾಲೆಗಳಿಗೆ ಎಸ್‌ಡಿಎಂಸಿ ಪದಾಧಿಕಾರಿಗಳು ಖರೀದಿಸಿದ ಡೆಸ್ಕುಗಳ ತೀರಾ ಕಳಪೆ ಮಟ್ಟದ್ದಾಗಿವೆ ಎಂದು ವಿರೋಧ ಪಕ್ಷದ ನಾಯಕ ಮಧು ಪಾಣಿಗಟ್ಟಿ ಆರೋಪಿಸಿ ಬಿಆರ್‌ಸಿ ಅಧಿಕಾರಿಗಳು ಅಂತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯರಾದ ಬಸವರಾಜ ಹಾದಿಮನಿ, ಮಹದೇವಪ್ಪ ಭಾಗಸರ, ಅಬಿದಾಭಿ ನದಾಫ, ಕಸ್ತೂರವ್ವ ವಡ್ಡರ, ಉಪಾಧ್ಯಕ್ಷೆ ಅನಿತಾ ಶಿವೂರ, ಇಓ ಮನೋಜಕುಮಾರ ಗಡಬಳ್ಳಿ ಇದ್ದರು.