ಸುದ್ದಿ ಸಂಕ್ಷೇಪ
ವಸತಿ ಸಮಸ್ಯೆ ಸರಿಪಡಿಸಿ
ಶಿಗ್ಗಾಂವಿ: ತಾಲೂಕಿನ ಹುಲಗೂರು ಗ್ರಾಮ ಪಂಚಾಯಿತಿಗೆ 2010-11ರಲ್ಲಿ ರಾಜೀವ್ಗಾಂಧಿ ವಸತಿ ನಿಗಮದಿಂದ ಬಸವ ವಸತಿ (ಗುಡಿಸಲು ವಾಸಿ) ಯೋಜನೆಯಡಿಯಲ್ಲಿ 930 ಮನೆಗಳು ಮಂಜೂರಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಸರಿಯಾಗಿ ಆನ್ಲೈನ್ ಮಾಹಿತಿ ನೀಡದಿರುವುದರಿಂದ ರದ್ದಾಗಿದೆ. ಕೂಡಲೇ ಅವುಗಳನ್ನು ಸರಿಪಡಿಸಿ ಮನೆಗಳನ್ನು ಹಾಕಿಕೊಳ್ಳುತ್ತಿರುವ ಗ್ರಾಮಸ್ಥರಿಗೆ ಈ ಮನೆಗಳನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಶೇಖಪ್ಪ ಗಣಾಚಾರಿ ಆಗ್ರಹಿಸಿದ್ದಾರೆ. ತಾಪಂ ಇಓ ಹಾಗೂ ಜಿಪಂ ಸಿಇಓ ಬಡವರ ಕುರಿತು ಸಮಗ್ರ ತನಿಖೆ ಮಾಡಿ ಅವುಗಳನ್ನು ಪುನಃ ನೀಡುವಂತಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅಬಕಾರಿ ದಾಳಿ: ಮದ್ಯ ವಶ
ಹಾವೇರಿ: ಅನುಮತಿ ಇಲ್ಲದೇ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಪೊಲೀಸರು ರು. 1817 ಮೌಲ್ಯದ 41 ಬಾಟಲ್ ಮದ್ಯ ವಶ ಪಡಿಸಿಕೊಂಡಿದ್ದಾರೆ. ಬಂಧಿತನನ್ನು ಬಸಪ್ಪ ಫಕ್ಕೀರಪ್ಪ ಪೂಜಾರ ಎಂದು ಗುರುತಿಸಲಾಗಿದೆ. ದಾಳಿಯ ನೇತೃತ್ವವನ್ನು ಹಲಗೇರಿ ಪಿಎಸ್ಐ ನಾಗನಗೌಡ ವಹಿಸಿದ್ದರು. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಚಾರಣಾಧೀನ ಕೈದಿ ಪರಾರಿ
ಹಾವೇರಿ: ಬಟ್ಟೆ ಒಣಗಿಸುವ ನೆಪದಲ್ಲಿ ಉಪಕಾರಾಗೃಹದ ಎತ್ತರದ ಗೋಡೆ ಹಾರಿ ವಿಚಾರಣಾಧೀನ ಕೈದಿ ಪರಾರಿಯಾದ ಘಟನೆ ಶಿಗ್ಗಾಂವಿ ಉಪಕಾರಾಗೃಹದಲ್ಲಿ ನಡೆದಿದೆ. ಪರಾರಿಯಾದ ಕೈದಿಯನ್ನು ಹಜರತ್ಅಲಿ ಮಹ್ಮದಗೌಸ ಮೋಮಿನ್ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಅಧೀಕ್ಷಕ ಗುರುನಾಥ ಕೃಷ್ಣಾಜಿ ರತ್ನಾಕರ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಮಾಹಿತಿ ಸಭೆ
ಹಾವೇರಿ: ಮೇ 5ರಂದು ಜರುಗಲಿರುವ ವಿಧಾಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅನುಷ್ಠಾನ ಕುರಿತು ಜಿಲ್ಲೆಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಮಾಹಿತಿ ನೀಡಲು ಜಿಲ್ಲಾ ಚುನಾವಣಾಧಿಕಾರಿಗಳು ಮಾ. 22ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆ ಏರ್ಪಡಿಸಿದ್ದಾರೆ. ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಸಭಾ ತಿಳಿವಳಿಕೆ ಪತ್ರಗಳನ್ನು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆ ನೀಡಿದೆ.
ವಿದ್ಯುತ್ ಪೂರೈಕೆಗೆ ಸಹಕರಿಸಿ
ಹಾವೇರಿ: ವಿದ್ಯುತ್ ಉತ್ಪಾದನೆ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಸಬೇಕಾಗಿದೆ. ಆದ್ದರಿಂದ ಮಾ. 22ರಿಂದ ಹಾವೇರಿ ಜಿಲ್ಲಾದ್ಯಂತ, ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಮಾಡುವ ಎಲ್ಲ ಫೀಡರ್ಗಳಿಗೆ ಟೂ ಫೇಸ್ ವಿದ್ಯುತ್ ಸಂಜೆ 6ರಿಂದ ರಾತ್ರಿ 10ರ ವರೆಗೆ ಪೂರೈಕೆಯಾಗುವುದು. ರೈತರು ಪಂಪ್ಸೆಟ್ಗಳನ್ನು ಸಂಜೆ 6ರಿಂದ ರಾತ್ರಿ 10ರ ವರೆಗೆ ಚಾಲನೆ ಮಾಡದೇ ಸಹಕರಿಸುವಂತೆ ಹೆಸ್ಕಾಂನ ಕಾರ್ಯ, ಪಾಲನೆ ವೃತ್ತದ ಅಧೀಕ್ಷಕ ಎಂಜಿನೀಯರ್ ಎನ್.ಬಿ. ಕಟಕೋಳ ವಿನಂತಿಸಿದ್ದಾರೆ.