ಹಾಲಿನ ಪ್ರೋತ್ಸಾಹಧನಕ್ಕೆ ರೈತರ ಆಗ್ರಹ
ಬ್ಯಾಡಗಿ: ಸ್ಥಗಿತಗೊಂಡಿರುವ ಹಾಲಿನ ಪ್ರೋತ್ಸಾಹಧನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಸದಸ್ಯರು ಗುರುವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರೈತ ಸಂಘದ ಉಪಾಧ್ಯಕ್ಷ ಕೆ.ವಿ. ದೊಡ್ಡಗೌಡ್ರ ಮಾತನಾಡಿ, ರಾಜ್ಯದಲ್ಲಿ ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತಿಸಿದ ಸರ್ಕಾರ ಪ್ರತಿ ಲೀಟರ್ ಹಾಲಿಗೆ ರು. 2 ಪ್ರೋತ್ಸಾಹಧನ ಘೋಷಿಸಿದೆಯಲ್ಲದೇ, ಆಯವ್ಯಯದಲ್ಲಿ ಅನುದಾನವನ್ನೂ ಮೀಸಲಿಡುತ್ತಾ ಬಂದಿದೆ. ಆದರೆ ಮೀಸಲಿಟ್ಟ ಅನುದಾನವನ್ನು ಕಳೆದ ಮೂರ್ನಾಲ್ಕು ವರ್ಷದಿಂದ ರೈತ ಕುಟುಂಬಗಳಿಗೆ ನೀಡದೇ ಸರ್ಕಾರ ವಂಚಿಸಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಪ್ರೋತ್ಸಾಹಧನಕ್ಕೆ ಕಾದು ಕುಳಿತಿರುವ ರೈತರು, ನಿತ್ಯ ಹಾಲಿನ ಕೇಂದ್ರಗಳಿಗೆ ಅಲೆಯುವಂತಾಗಿದೆ. ಅದನ್ನೇ ನೆಚ್ಚಿದ ಸಾಲಸೂಲ ಮಾಡಿದ ಕೆಲ ಕುಟುಂಬಗಳು ಹೈನುಗಾರಿಕೆಯನ್ನು ತೊರೆದು ಬೀದಿಗೆ ಬರುವಂತಾಗಿದೆ ಎಂದರು.
ಶಹರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ ಮಾತನಾಡಿ, ರಾಜ್ಯಾದ್ಯಂತ ಬರಗಾಲದ ಛಾಯೆ ಆವರಿಸಿದ್ದು, ತಾಲೂಕಿನಲ್ಲಿಯೂ ಜಾನುವಾರುಗಳ ಮೇವು ಹಾಗೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಹೈನುಗಾರಿಕೆ ನಡೆಸುವುದು ಕಷ್ಟಸಾಧ್ಯ. ಇದ್ದ ಅಲ್ಪಸ್ವಲ್ಪ ಹಣದಲ್ಲಿ ದುಬಾರಿ ಹಣ ತೆತ್ತು ದೂರದಿಂದ ಮೇವು ಸಂಗ್ರಹಿಸಿಕೊಳ್ಳಲಾಗಿದೆ. ಕೂಡಲೇ ಹಾಲಿನ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭ ಮಂಜು ತೋಟದ, ಪಿ.ಎಸ್. ಹಿರೇಮಠ, ಅಶೋಕ ಮಾಳೇನಹಳ್ಳಿ, ಬಿ.ಎಚ್. ಬುಡ್ಡನಗೌಡ್ರ, ಕರಬಸಯ್ಯ ಕಲ್ಮಠ ಇನ್ನಿತರರು ಭಾಗವಹಿಸಿದ್ದರು.