ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಕ್ರಮ ಮದ್ಯ ಮಾರಾಟ ತಡೆಯಿರಿ

Mainashree
Updated On : 23 Mar 2013, 11:07 am

ಬ್ಯಾಡಗಿ: ಅಕ್ರಮ ಮದ್ಯ ಮಾರಾಟ ಸ್ಥಗಿತಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಅಳಲಗೇರಿ ಗ್ರಾಮದ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಗ್ರಾಮದ ಮಹಿಳೆಯರ ಸಹಕಾರದೊಂದಿಗೆ ಅಬಕಾರಿ ಇಲಾಖೆ ಎದುರು ಶುಕ್ರವಾರ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹಠಾತ್ ಪ್ರತಿಭಟನೆ ನಡೆಸಿದರು.
ಬಂಧನಕ್ಕೆ ಆಗ್ರಹ: ವಿವಿಧ ವಾಹನಗಳಲ್ಲಿ ಪಟ್ಟಣಕ್ಕೆ ಆಗಮಿಸಿದ ಗ್ರಾಮದ ನೂರಾರು ಮಹಿಳೆಯರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರಲ್ಲದೇ ಅಕ್ರಮ ಮಾರಾಟದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬಂಧಿಸಬೇಕು ಹಾಗೂ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಿಸಿದರು. ಅಬಕಾರಿ ಕಚೇರಿಗೆ ತೆರಳಿ ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭ ಬಸವರಾಜ ಹಲಗೇರಿ ಮಾತನಾಡಿ, ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಕುಡುಕರ ಸಂಖ್ಯೆ ಅತಿಯಾಗಿದೆ. ಕುಡಿತದ ಚಟಕ್ಕೆ ಜೋತು ಬಿದ್ದಿರುವ ಯುವಕರು ದುಡಿದ ಹಣವನ್ನು ಕುಡಿತಕ್ಕೆ ಹಾಳು ಮಾಡುತ್ತಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಆದರೆ, ಅಬಕಾರಿ ಅಧಿಕಾರಿಗಳಿಗೆ ಜನರ ನೋವು ಅರ್ಥವಾದಂತೆ ಕಾಣುತ್ತಿಲ್ಲ. ಇದಕ್ಕೆ ಇಲಾಖೆಯೇ ಹೊಣೆ ಎಂದು ಆರೋಪಿಸಿದರು.
6 ಕಡೆಗಳಲ್ಲಿ ಮಾರಾಟ: ಗ್ರಾಮ ಘಟಕದ ಅಧ್ಯಕ್ಷೆ ಪುಟ್ಟವ್ವ ಓಲೇಕಾರ ಮಾತನಾಡಿ, ಗ್ರಾಮದ ಸುಮಾರು 6 ಕಡೆಗಳಲ್ಲಿ ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದೆ. ಗೂಡಂಗಡಿ ತೆರವುಗೊಳಿಸುವಂತೆ ಈ ಹಿಂದೆಯೂ ಪ್ರತಿಭಟನೆ ನಡೆಸಿ 4 ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸದ ಅಧಿಕಾರಿಗಳು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು.
ಚಟಗಳ ದಾಸರು: ಸುಜಾತ ಮಡಿವಾಳರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಏನೂ ಅರಿಯದ ಮಕ್ಕಳೂ ಮದ್ಯಪಾನದಲ್ಲಿ ತೊಡಗಿದ್ದು, ದುಶ್ಚಟಗಳ ದಾಸರಾಗುತ್ತಿದ್ದಾರೆ. ಕುಡಿಯಲು ಹಣವಿಲ್ಲದ ಅವರು ಮನೆಯಲ್ಲಿನ ದವಸಧಾನ್ಯ, ಪಾತ್ರೆ, ಒಡವೆ, ಕೈಗೆ ಸಿಕ್ಕ ವಸ್ತುಗಳನ್ನು ಕಳ್ಳತನದಿಂದ ಮಾರಾಟ ಮಾಡುತ್ತಿದ್ದು, ಬಂದ ಹಣದಲ್ಲಿ ಮದ್ಯ ಸೇವನೆ ಮಾಡುತ್ತಿರುವ ಅವರ ಆರೋಗ್ಯ ಹಾಳಾಗುತ್ತಿದೆ ಎಂದರು.
ವಾಗ್ವಾದಕ್ಕೆ ಕಾರಣ: ಸೋಮೇಶ್ ಹಿರೇಗೌಡ್ರ ಮಾತನಾಡಿ, ಗ್ರಾಮದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗುತ್ತಿರುವ ಹಿನ್ನೆಲೆಯಲ್ಲಿ ಪುರುಷರು ದುಡಿದ ಹಣವನ್ನೆಲ್ಲಾ ಕುಡಿದು ಹಾಳು ಮಾಡುತ್ತಿದ್ದಾರೆ. ಸಂಜೆಯಾಗುತ್ತಲೇ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ತೆರಳಿ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಹೆಂಡತಿ ಮಕ್ಕಳೊಂದಿಗೆ ಜಗಳವಾಡುವ ಮೂಲಕ ಅನಗತ್ಯ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಇದರಿಂದ ಕುಟುಂಬದ ಸದಸ್ಯರಲ್ಲಿ ವೈಮನಸ್ಸು ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ ಎಂದರು.
ದೂರು ಸಲ್ಲಿಸಲು ನಿರ್ಧಾರ: ಗದಿಗೆವ್ವ ಓಲೇಕಾರ ಮಾತನಾಡಿ, ಅಕ್ರಮ ಮದ್ಯ ಮಾರಾಟದಿಂದ ನಮ್ಮ ಗಂಡಂದಿರು ಹಾಳಾಗುತ್ತಿದ್ದಾರೆ. ಮದ್ಯ ಮಾರಾಟ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡ ಮಹಿಳೆಯರ ಮೇಲೆ ಕಳೆದ ರಾತ್ರಿ ಮದ್ಯ ಮಾರಾಟಗಾರರು ಗುಂಪಾಗಿ ಬಂದು ಹಲ್ಲೆ ನಡೆಸಿದ್ದಾರೆ. ಗ್ರಾಮದ ಹಿರಿಯರ ಗಮನಕ್ಕೆ ತಂದು ಮಾರಾಟಗಾರರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಚೌಡವ್ವ ಎತ್ತಿನಹಳ್ಳಿ, ರೇಣುಕಾ, ದುರುಗವ್ವ, ದ್ಯಾಮವ್ವ, ಶಿವಕ್ಕ, ಗಂಗವ್ವ, ನೀಲವ್ವ, ಯಲ್ಲವ್ವ, ಗೌರವ್ವ ಇನ್ನಿತರ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement