ಅತಿಥಿ ಉಪನ್ಯಾಸಕರಿಗೆ ಸಂಭಾವನೆ ಒದಗಿಸಿ
ಶಿಗ್ಗಾಂವಿ: ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಅತಿಥಿ ಉಪನ್ಯಾಸಕರ ಸಂಭಾವನೆ ನೀಡುತ್ತಿಲ್ಲ. ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಿ ನಮ್ಮ ಜೀವನೋಪಾಯಕ್ಕೆ ಅನುವು ಮಾಡಿಕೊಡಬೇಕೆಂದು ತಹಸೀಲ್ದಾರ್ ಎ.ಎ. ಕುಲಕರ್ಣಿಯವರಿಗೆ ಮನವಿ ನೀಡಿ ಆಗ್ರಹಿಸಿದರು.
ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಅತಿಥಿ ಉಪನ್ಯಾಸಕರ ಸಂಭಾವಣೆಯನ್ನು ಐಟಿಐ ಕಾಲೇಜಿನ ಪ್ರಾಚಾರ್ಯ ಆರ್.ಡಿ. ಮೊಕಾಶಿ ನೀಡುತ್ತಿಲ್ಲ ಎಂದು ಆರೋಪಿಸಿದ ಗೌರವ ಉಪನ್ಯಾಸಕರು ನಮಗೆ ನೀಡಬೇಕಾಗಿದ್ದ ಗೌರವ ಧನದಲ್ಲಿ ಶೇ. 14ರಷ್ಟು ಹಣವನ್ನು ನೀಡುವಂತೆ ಹೇಳುತ್ತಿದ್ದಾರೆ. ನಮಗೆ ಸಿಗುವ ಸ್ವಲ್ಪ ಸಂಭಾವನೆಯಲ್ಲಿಯೆ ಶೇ. 14ರಂತೆ ಹಣ ನೀಡುವಂತೆ ಆಡಳಿತಾಧಿಕಾರಿಗಳು ಹಾಗೂ ತರಬೇತಿ ಅಧಿಕಾರಿಗಳಾದ ಟಿ.ಸಿ. ಚವ್ಹಾಣ ಅವರನ್ನು ಪ್ರಾಚಾರ್ಯರು ಕೇಳುತ್ತಿದ್ದಾರೆ. ಕೇಳಿದ ಹಣ ನೀಡದಿದ್ದರೆ ಬಂದ ತಮ್ಮೆಲ್ಲರ ಸಂಭಾವನೆಯನ್ನು ಪರತ ಸರ್ಕಾರಕ್ಕೆ(ಖಜಾನೆ)ಕಳಿಸುವ ಬೆದರಿಕೆ ಕೂಡಾ ಹಾಕುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಾದ ಉದ್ಯೋಗ ಮತ್ತು ತರಬೇತಿ ಇಲಾಖೆ ಬೆಂಗಳೂರು ಹಾಗೂ ಹುಬ್ಬಳ್ಳಿಯ ಜಂಟಿ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ನೂತನ ಪ್ರಾಚಾರ್ಯ ಆರ್.ಡಿ. ಮೊಕಾಶಿ ಮಾ. 18ರಂದೆ ಖಜಾನೆಯಿಂದ ರು. 5,19,600 ಬಿಡುಗಡೆ ಮಾಡಿಕೊಂಡು ಬಂದಿದ್ದು, ಆದರೆ, ನಮ್ಮ ಸಂಭಾವನೆಯನ್ನು ನೀಡಲು ಮಿನಮೇಷ ಮಾಡುತ್ತಿದ್ದಾರೆ. ಕಳೆದ 2-3 ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಹಿಂದಿದ್ದ ಪ್ರಾಚಾರ್ಯರು ಯಾರೂ ಈ ರೀತಿ ನಡೆದುಕೊಂಡಿಲ್ಲ. ಆದ್ದರಿಂದ ತಕ್ಷಣ ಇದರ ಕುರಿತು ಸಮಗ್ರ ತನಿಖೆ ಮಾಡಿ ಸಂಬಂಧಿಸಿದ ಪ್ರಾಚಾರ್ಯ ಆರ್.ಡಿ. ಮೊಕಾಸಿ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಅತಿಥಿ ಉಪನ್ಯಾಸಕರಾದ ಅಜೆಮಖಾನ್ ನಾಗಡ, ಆಧಿನಾಥ ಗೋಟಗೋಡಿ, ಪುಟ್ಟಮ್ಮ ಗೋಟಗೋಡಿಮಠ, ವಿನೋದಾ. ಎಸ್. ಹಿರೇಮಠ, ವಿನಯ. ಪಿ. ತೊರಗಲ್, ಜಯಾ ಸುರಳೇಶ್ವರ, ಜಿಬ್ರಾಯಿಲ್ ಎಂ. ಮೆಣಸಗಿ, ಮಮ್ಮದ್ ರಫೀಕ ಬೆಳಗಾಲಪೇಟಿ, ವೀರಭದ್ರಗೌಡ ಪಂಚಪ್ಪನವರ, ಸುರೇಶ ಪ್ರಧಾನಿ ಸಹಿ ಮಾಡಿದ ಮನವಿ ಸಲ್ಲಿಸಿ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಎ.ಎ. ಕುಲಕರ್ಣಿ ಮಾತನಾಡಿ, ತಮಗೆ ಆದ ಸಮಸ್ಯೆಗಳನ್ನು ತಿಳಿದುಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.