ದೈಹಿಕ ಶಿಕ್ಷಣದಿಂದ ಶಿಸ್ತು: ಕೆ. ರಾಮಶೆಟ್ಟಿ
ಹಾವೇರಿ: ದೈಹಿಕ ಶಿಕ್ಷಕರು ಶಾಲೆಗಳ ಆಧಾರ ಸ್ತಂಭ ಇದ್ದಂತೆ. ದೈಹಿಕ ಶಿಕ್ಷಕರಿಲ್ಲದ ಶಾಲೆಯಲ್ಲಿ ಶಿಸ್ತು ಇರಲು ಸಾಧ್ಯವಿಲ್ಲ. ಕಾರಣ ದೈಹಿಕ ಶಿಕ್ಷಕರಿದ್ದಲ್ಲಿ ಶಿಸ್ತಿಗೆ ಹೆಚ್ಚಿನ ಒತ್ತು ಇದೆ ಎಂಬುದನ್ನರಿತುಕೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮಶೆಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾ ಗುರುಭವನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾಮಟ್ಟದ ಕಾರ್ಯಾಗಾರವನ್ನು 'ಹೊಂಗನಸು' ಎಂಬ ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಶಿಕ್ಷಕರ ಶ್ಲಾಘನೀಯ: ಶಾಲೆಯಲ್ಲಿ ಶಿಸ್ತು ನೆಲೆಗೊಳ್ಳುವುದು ಅದರ ಮುಖ್ಯಾಧ್ಯಾಪಕ ಹಾಗೂ ದೈಹಿಕ ಶಿಕ್ಷಕರ ಬಾಂಧವ್ಯದ ಮೇಲೆ. ಈ ನಿಟ್ಟಿನಲ್ಲಿ ಮುಖ್ಯಾಧ್ಯಾಪಕರಷ್ಟೇ ಜವಾಬ್ದಾರಿ ದೈಹಿಕ ಶಿಕ್ಷಕರದ್ದೂ ಆಗಿದೆ. ಇತ್ತೀಚಿನ ದಿನಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಲ್ಲೂ ವಿಷಯ ಶಿಕ್ಷಕರಂತೆ ಬದಲಾವಣೆ ತಂದಿರುವುದು ಶ್ಲಾಘನೀಯ. ಇದರಿಂದ ದೈಹಿಕ ಶಿಕ್ಷಕರೂ ವಿಷಯ ಶಿಕ್ಷಕರಂತೆ ಕಾರ್ಯನಿರ್ವಹಿಸಲು ಹಾಗೂ ಅಷ್ಟೇ ಜಬಾಬ್ದಾರಿ ನಿರ್ವಹಿಸಲು ಸಮರ್ಥರು ಎಂಬುದನ್ನು ತೋರಿದಂತಾಗಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕರಲ್ಲಿನ ವೇತನ ತಾರತಮ್ಯ, ಮನೆ ಭತ್ಯೆ, ಮತ್ತಿತರ ಭತ್ಯೆಗಳ ಸೇರ್ಪಡೆ, ಬಿಡುಗಡೆ, ಕಡಿತ ಕುರಿತಂತೆ ಅನಗತ್ಯ ಕಿರಿಕಿರಿ ಅನುಭವಿಸಿರುವುದು ನಿಜ. ಆದರೆ, ಸರ್ಕಾರ ಇವುಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯೊಂದನ್ನು ತಯಾರಿಸಿದ್ದು, ಮುಂಬರುವ ದಿನಗಳಲ್ಲಿ ಈ ಗೊಂದಲ ನಿವಾರಣೆಯಾಗಲಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಜೆ. ಓಲೇಕಾರ, ಸಂಪನ್ಮೂಲ ವ್ಯಕ್ತಿಗಳಾಗಿ ಹೋಬಾ ನಾಯಕ, ಆರ್.ಎನ್. ಹುರಳಿ, ಎಸ್.ಜಿ. ಕೋಟಿ, ಭಾರತಿ ಬಬಲೇಶ, ಎಸ್‌ಎನ್‌ಎಸ್ ಹುಸೇನ, ಸಿ.ಎ. ಅಜ್ಜೋಡಿಮಠ, ಆರ್.ಸಿ. ಮೇಟಿ, ಹಾರಂಗಿ, ಹೊಟ್ಟಿಗೌಡ್ರ ಇದ್ದರು.