ಪ್ರಾಣಿಗಳನ್ನಲ್ಲ, ದುಶ್ಚಟ ಬಲಿ ಕೊಡಿ
ಶಿಗ್ಗಾಂವಿ: ಜಾತ್ರೆಗಳಲ್ಲಿ ಮೂಕ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ ಮನುಷ್ಯನಲ್ಲಿರುವ ದುಶ್ಚಟಗಳನ್ನು ಒಂದೊಂದಾಗಿ ತ್ಯಜಿಸಿದಾಗ ಮನುಜ ಮತ ಸಾರ್ಥಕವಾಗುತ್ತದೆ. ನಮ್ಮ ಜಾತ್ರೆಗಳು ಧಾರ್ಮಿಕ ಯಾತ್ರೆಗಳಾದಾಗ ಮಾತ್ರ ಅವುಗಳಿಗೆ ಮೌಲ್ಯ ತುಂಬಲು ಸಾಧ್ಯ ಎಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ನುಡಿದರು.
ಇಲ್ಲಿನ ಗ್ರಾಮ ದೇವಿಯ ಜಾತ್ರಾ ಮಹೋತ್ಸವದ 8ನೇ ದಿನದ ಧರ್ಮಸಭೆಯ ಸಮ್ಮುಖ ವಹಿಸಿ ಮಾತನಾಡಿ, ಬೆಳಕಿರುವ ಕಡೆ ಬೆಳಕು ಹುಡುಕುವುದು ಅಜ್ಞಾನಿಯ ಕೆಲಸ. ಸುಜ್ಞಾನಿ ಜನರ ಮನಸ್ಸನ್ನು ತೊಳೆದು ಬೆಳಕನ್ನು ತೋರಿಸುತ್ತಾನೆ.
ಭಾರತದ ಸಂಸ್ಕೃತಿ ಅಧ್ಯಯನ ಮಾಡಲು ಅನೇಕ ವಿದೇಶಿಯರು ಬರುತ್ತಿದ್ದಾರೆ. ಇಲ್ಲಿರುವ ವಿದ್ವಾಂಸರು, ದೇವಸ್ಥಾನಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ದೇಶದ ಮೇಲೆ ಸಾಕಷ್ಟು ಬಾರಿ ದಾಳಿಗಳು ನಡೆದಿವೆ. ಆದರೂ ಮೂಲ ಸಂಸ್ಕೃತಿಗೆ ಧಕ್ಕೆ ಆಗಿಲ್ಲ. ಪಾಶ್ಚಾತ್ಯ ದೇಶಗಳು ಭಾರತೀಯ ಸಂಸ್ಕೃತಿಯನ್ನು ಗೌರವಿಸಿ ಆಧರಿಸಿ ಅನುಸರಿಸಲಾರಂಭಿಸಿವೆ. ನಮ್ಮ ಇಂದಿನ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಪರ್ಯಾಸ ಎಂದರು.
ಮಹಾಲಿಂಗಪುರದ ಸೂಫಿ ಸಂತ ಇಬ್ರಾಹಿಂ ಸುತಾರ ಉಪನ್ಯಾಸ ನೀಡಿ, ಮನುಷ್ಯ ಕೃತಜ್ಞತಾ ಭಾವದಿಂದ ಬದುಕಿದರೆ ಜೀವನ ಸಾರ್ಥಕ. ಪ್ರತಿಯೊಬ್ಬರಲ್ಲೂ ಪಂಚ ಋಣಗಳಿವೆ. ಪರಮಾತ್ಮನ ಋಣ, ತಾಯಿ-ತಂದೆಯರ ಋಣ, ಜ್ಞಾನ ನೀಡಿದ ಗುರುವಿನ ಋಣ, ಸಮಾಜದ ಋಣ ಹಾಗೂ ಭೂತಾಯಿಯ ಋಣ. ಇವುಗಳಿಗೆ ಕೃತಜ್ಞತೆಯಿಂದ ಸೇವೆ ಸಲ್ಲಿಸಿದಲ್ಲಿ ಜೀವನಕ್ಕೆ ಸಾರ್ಥಕತೆ ಇದೆ ಎಂದರು.
ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಫಕ್ಕೀರಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ. ಅಕ್ಕಿ, ಸಣ್ಣಪ್ಪ ಬುಳ್ಳಕ್ಕನವರ, ಅರ್ಜುನ ಹಂಚಿಮನಿ, ನಾಗಪ್ಪ ಯಲವಿಗಿ, ವಿ.ಎ. ಶೇಠರಾಯ್ಕರ, ವಿರೂಪಾಕ್ಷಪ್ಪ ನಡೂರ, ಅಣ್ಣಪ್ಪ ಕಮ್ಮಾರ ಉಪಸ್ಥಿತರಿದ್ದರು.
ಶಂಕರಗೌಡ ಪಾಟೀಲ ಸ್ವಾಗತಿಸಿದರು. ರೇಖಾ ಜವಳಿ, ಎನ್.ಎನ್. ಪಾಟೀಲ ನಿರ್ವಹಿಸಿ ವಂದಿಸಿದರು.