ಮುದಕಣ್ಣನವರ ನೇಮಕ
ಹಾವೇರಿ: ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಚಂದ್ರಶೇಖರ ಮುದಕಣ್ಣನವರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾಗಿನೆಲೆಯ ಕನಕ ಪೀಠದಲ್ಲಿ ನಿರಂಜನಾನಂದ ಪುರಿ ಶ್ರೀಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುದಕಣ್ಣನವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಾವೇರಿ ನಗರಸಭೆಯ ನೂತನ ಸದಸ್ಯ ಹನುಮಂತಪ್ಪ ಶರಸೂರಿ, ಬಿ.ಕೆ. ಕುರಿ, ಶಿವಪ್ಪ ಜೇಡಿನ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಾಲತೇಶ ಬಣಕಾರ, ಸಂಘಟನಾ ಕಾರ್ಯದರ್ಶಿಯಾಗಿ ಮಾರುತಿ ಹರಿಹರ ಹಾಗೂ ಮಾಲತೇಶ ತಿರಕಣ್ಣವರ, ಚಂದ್ರಶೇಖರ ಒಡೆಯರವರನ್ನು ನೇಮಕ ಮಾಡಲಾಯಿತು. ಕಾರ್ಯಕಾರಿ ಸದಸ್ಯರಾಗಿ ಖಂಡೇಗೌಡ ಪಾಟೀಲ, ಕಣ್ಣಪ್ಪ ಕೋಟಿಹಾಳ, ಕೋಟೆಪ್ಪ ಕಚ್ಚೆರವಿ, ಕುಬೇರಪ್ಪ ಕೊಂಡಜ್ಜಿ, ಅನ್ನಪ್ಪ ಕಂಬಳಿ, ಉಚ್ಚಪ್ಪ ಜಡೇಣ್ಣನವರ, ಕೃಷ್ಣಪ್ಪಾ ಕಂಬಳಿ, ನಾಗರಾಜ ಬಂಕಾಪುರ, ಮಾಲತೇಶ ಬ್ಯಾಗವ್ಯಾದಿ, ನೀಲಪ್ಪ ಕಣ್ಣಮ್ಮನವರ, ಫಕ್ಕೀರಪ್ಪ ಗುಳೇದ, ರಾಮಣ್ಣ ಉಕ್ಕುಂದ, ರವಿ ಕಂಬಳಿ, ಮಂಜುನಾಥ ಹೆಬಸೂರು ಅವರನ್ನು ನೇಮಕ ಮಾಡಲಾಯಿತು.
ಭಾಷಣ: ವನಿತಾ ಪ್ರಥಮ
ಹಿರೇಕೆರೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಸ್ಥಳೀಯ ಬಿ.ಆರ್. ತಂಬಾಕದ ವಿದ್ಯಾಲಯದ ವಿದ್ಯಾರ್ಥಿನಿಯರಾದ ವನಿತಾ ಗೊಂದಿ ಪ್ರಥಮ, ಸುನೀತಾ ರಟ್ಟೀಹಳ್ಳಿ ದ್ವಿತೀಯ, ಹಂಸಭಾವಿ ಗ್ರಾಮದ ಎಂವಿಎಸ್‌ಎಸ್ ವಿದ್ಯಾಲಯದ ಶೃತಿ ಸೋಮಣ್ಣನವರ ತೃತೀಯ ಹಾಗೂ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅಜಯ ಕಲ್ಯಾಣಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಪರಂಪರೆ ಕೂಟದ ಸಂಚಾಲಕ ಎಸ್.ಪಿ. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.ಸಿ. ಪಾಟೀಲ ರಾಜಿನಾಮೆ
ಹಿರೇಕೆರೂರು: ವಿವಿಧ ಕಾರ್ಯಗಳ ಒತ್ತಡದಿಂದ ಹಿರೇಕೆರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ಡಿ.ಸಿ. ಪಾಟೀಲ ಹೇಳಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೇರೆಯವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿ ಕೊಟ್ಟು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು. ಶಾಸಕ ಬಿ.ಸಿ. ಪಾಟೀಲ, ಎಪಿಎಂಸಿ ನಿರ್ದೇಶಕ ಪರಮೇಶಪ್ಪ ಗವಿಯಪ್ಪನವರ, ಜಿಪಂ ಮಾಜಿ ಸದಸ್ಯ ಬಿ.ಎನ್. ಬಣಕಾರ ಹಾಜರಿದ್ದರು.
ಟಿಪ್ಪರ್ ಹರಿದು ವ್ಯಕ್ತಿ ಸಾವು
ಹಾವೇರಿ: ನಿರ್ಲಕ್ಷ್ಯ ಹಾಗೂ ವೇಗವಾಗಿ ಟಿಪ್ಪರ್ ಓಡಿಸಿದ ಪರಿಣಾಮ ಟಿಪ್ಪರ್ ಮನೆ ಎದುರು ಮಲಗಿದವನ ತಲೆ ಮೇಲೆ ಸಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಕಾಪುರದಲ್ಲಿ ಜರುಗಿದೆ. ಮೃತನನ್ನು ಲಕ್ಷ್ಮಣ ಸಿದ್ದರಾಮಪ್ಪ ಬಡಿಗೇರ (23) ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಅಲ್ಲಾವುದ್ದೀನ್ ಗೂಡುಸಾಬ ದಖನಿ ವಿರುದ್ಧ ಗುಡ್ಡರಾಜ ನಿಂಗಪ್ಪ ಮಾದರ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.