ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶೇ. 99ರಷ್ಟು ಎಪಿಕ್ ಕಾರ್ಡ್ ವಿತರಣೆ

Mainashree
Updated On : 23 Mar 2013, 11:10 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 22
ಜಿಲ್ಲೆಯಲ್ಲಿ ಈಗಾಗಲೇ 99.65ರಷ್ಟು ಮತದಾರರು ಚುನಾವಣಾ ಆಯೋಗದ ಎಪಿಕ್ ಕಾರ್ಡ್ ಹೊಂದಿದ್ದು, ಶೇ. 0.35ರಷ್ಟು ಜನತೆಗೆ ಏ. 10ರೊಳಗಾಗಿ ಏಪಿಕ್ ಕಾರ್ಡ್ ವಿತರಿಸಲಾಗುವುದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದರು.
ಈ ಕುರಿತಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 10,52,587 ಮತದಾರರಿದ್ದು, ಅದರಲ್ಲಿ 5,56,360 ಪುರುಷ ಹಾಗೂ 4,96,227 ಮಹಿಳಾ ಮತದಾರರಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇದೆ. ಮಹಿಳಾ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ.
ಮಹಿಳೆಯರೇ ಕಡಿಮೆ: ಅಲ್ಲದೇ ಆಶಾ ಕಾರ್ಯಕರ್ತೆಯರ ಸಹಾಯವನ್ನು ಈ ಕೆಲಸದಲ್ಲಿ ಪಡೆಯಲಾಗುತ್ತಿದೆ. ಜಿಲ್ಲೆಗೆ ಹೊಸದಾಗಿ ಮದುವೆಯಾಗಿ ಬಂದ ಮಹಿಳೆಯರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡದಿರುವುದೇ ಮಹಿಳಾ ಮತದಾರರ ಸಂಖ್ಯೆ ಕಡಿಮೆಯಾಗಲು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಸರಿಪಡಿಸಿಕೊಳ್ಳಿ: ಪ್ರಸಕ್ತ 2013ನೇ ಜನವರಿ 1ಕ್ಕೆ 18 ವರ್ಷ ತುಂಬಿದ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಏ. 10ರ ವರೆಗೂ ಸಮಯವಿದ್ದು, ಹೆಸರು ಕೈಬಿಟ್ಟು ಹೋಗಿದ್ದರೆ, ಬದಲಾಗಿದ್ದರೆ, ಸ್ಥಳ ಬದಲಾವಣೆ ಸೇರಿದಂತೆ ಅಗತ್ಯ ಬದಲಾವಣೆಗೆ ಏ. 10ರ ವರೆಗೂ ಅವಕಾಶವಿದೆ. ಇದಕ್ಕಾಗಿ ಬದಲಾವಣೆ ಅಗತ್ಯವಿದ್ದವರು ಫಾರ್ಮ್ 6,7,8, 8ಅ ಗಳಲ್ಲಿ ತುಂಬಿ ಕೊಡುವಂತೆ ಮನವಿ ಮಾಡಿದರು. ಪ್ರತಿ ಚುನಾವಣೆಯಲ್ಲಿ ಮತದಾರರ ಸ್ಲಿಪ್ ನೆಪದಲ್ಲಿ ಪ್ರಚಾರಕ್ಕೆ ಆಯೋಗ ಬ್ರೇಕ್ ನೀಡಿದೆ. ಈ ಕಾರ್ಯವನ್ನು ಜಿಲ್ಲಾಡಳಿತಕ್ಕೆ ವಹಿಸಿದ್ದು, ಅದನ್ನು ಜಿಲ್ಲಾಡಳಿತವೇ ಮನೆ ಮನೆಗೆ ಮುಟ್ಟಿಸಲಿದೆ ಎಂದರು. ಜನತೆಗೆ ಚುನಾವಣೆ ಕುರಿತಾದ ಮಾಹಿತಿ ನೀಡಲು ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ ವಿಶೇಷ ವಿಭಾಗ ಆರಂಭಿಸಲಾಗಿದೆ.
1,359 ಮತಗಟ್ಟೆ, 6 ಸಾವಿರ ಸಿಬ್ಬಂದಿ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 1,359 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ 4 ಸಿಬ್ಬಂದಿ ನಿಯೋಜಿಸಲಾಗುವುದು. ಅಲ್ಲದೇ ಶೇ. 10ರಷ್ಟು ಕಾಯ್ದಿರಿಸಿದ ಸಿಬ್ಬಂದಿ ಸೇರಿ ಒಟ್ಟು 6 ಸಾವಿರ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಏಕಗವಾಕ್ಷಿ ವ್ಯವಸ್ಥೆ: ಚುನಾವಣೆ ಸಂದರ್ಭ ಅಕ್ರಮಗಳಿಗೆ ಕಡಿವಾಣ ಹಾಕಲು ಸದಾಚಾರ ಸಮಿತಿಯನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ರಚಿಸಲಾಗಿದೆ. ಸಮಿತಿಯಲ್ಲಿ ಅಬಕಾರಿ, ಕಂದಾಯ, ಪೊಲೀಸ್ ಇಲಾಖೆಯವರು ಇರುತ್ತಾರೆ. ಯಾವುದೇ ಪಕ್ಷದ ಸಭೆ, ಸಮಾರಂಭ ನಡೆಸಲು ಕಟ್ಟುನಿಟ್ಟಾಗಿ ಅನುಮತಿ ಕಡ್ಡಾಯ. ಪರವಾನಿಗೆ ಪಡೆದುಕೊಳ್ಳಲು ಅಭ್ಯರ್ಥಿಗಳ ಅನುಕೂಲತೆ ದೃಷ್ಟಿಯಿಂದ ಆರ್‌ಓಗಳ ಬಳಿ ಏರಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಚುನಾವಣಾ ವಿಭಾಗದ ನಾಯಕ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement