26ರಿಂದ ಹಾನಗಲ್ಲ ಗ್ರಾಮದೇವಿ ಜಾತ್ರೆ
ಹಾನಗಲ್ಲ: ಹಾನಗಲ್ಲಿನ ಗ್ರಾಮದೇವಿ ಜಾತ್ರೆ ಮಾ. 26ರಿಂದ ಏ. 3ರ ವರೆಗೆ ಪಟ್ಟಣದಲ್ಲಿ ನಡೆಯಲಿದೆ. ವಾಹನಗಳು ಹಳೆ ಬಸ್ ನಿಲ್ದಾಣ ಮೂಲಕ ಹಾಯ್ದು ಹೋಗುವುದನ್ನು ಗುರುವಾರದಿಂದಲೇ ನಿರ್ಬಂಧಿಸಲಾಗಿದೆ. ಜಾತ್ರೆಯ ನಿಮಿತ್ತ ವಾಹನಗಳ ಸಂಚಾರಕ್ಕಾಗಿ, ತಾಲೂಕು ಆಡಳಿತ, ಜಾತ್ರಾ ಸಮಿತಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಕಲ್ಪಿಸಿದೆ. ಜಾತ್ರಾ ಮಹೋತ್ಸವ ಪೂರ್ಣಗೊಳ್ಳುವ ವರೆಗೆ ಹುಬ್ಬಳ್ಳಿ ಹಾಗೂ ಗದಗ ಕಡೆಯಿಂದ ಹಾನಗಲ್ಲಿಗೆ ಬಂದು, ಶಿವಮೊಗ್ಗಾ-ಹಾವೇರಿ-ಶಿರಶಿ ಕಡೆಗೆ ಹೋಗುವ ಭಾರಿ ವಾಹನಗಳಿಗೆ ಕುಂಟನಹೊಸಳ್ಳಿ-ಸುರಳೇಶ್ವರ ಮಾರ್ಗವಾಗಿ ಅಕ್ಕಿಆಲೂರ ಮತ್ತು ನಾಲ್ಕರ ಕ್ರಾಸ್ ಮೂಲಕ ಬೈಪಾಸ್‌ಗೆ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹಾವೇರಿ-ಹಾನಗಲ್ಲ-ಹಾವೇರಿ, ಸಿರಸಿ-ಹಾನಗಲ್ಲ-ಸಿರಸಿ, ಹಾನಗಲ್ಲ-ಶಿವಮೊಗ್ಗಾ ಬಸ್‌ಗಳಿಗೆ ಸ್ಥಳೀಯ ಕುಮಾರೇಶ್ವರ ಮಠದ ವೃತ್ತದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಹಾನಗಲ್ಲನಿಂದ ಶಿಗ್ಗಾಂವಿ, ಹುಬ್ಬಳ್ಳಿ, ಗದಗ ಹಾಗೂ ಮುಂಡಗೋಡ ಕಡೆಗೆ ಸಂಚರಿಸುವ ಬಸ್‌ಗಳು ಹಾನಗಲ್ಲಿನ ಹೊಸ ಬಸ್ ನಿಲ್ದಾಣದಿಂದ ಚಲಿಸಲಿವೆ. ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ. ಈ ಬದಲಾವಣೆಗೆ ಪ್ರಯಾಣಿಕರು ಹಾಗೂ ವಾಹನ ಚಾಲಕರು ಸಹಕರಿಸಬೇಕೆಂದು ಪ್ರಕಟನೆಯಲ್ಲಿ ಕೋರಲಾಗಿದೆ.
ಸಂತೆ ಸ್ಥಳಾಂತರ: ಪ್ರತಿ ಶುಕ್ರವಾರ ನಗರದಲ್ಲಿ ನಡೆಯುತ್ತಿದ್ದ ಸಂತೆಯನ್ನು ಜಾತ್ರೆ ನಿಮಿತ್ತ ತಾಲೂಕು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಮಾ. 29ರಂದು ನಡೆಯುವ ಸಂತೆಗಳನ್ನು ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಜಾತ್ರಾ ಕಮಿಟಿ ಹಾಗೂ ಪುರಸಭೆ ತಿಳಿಸಿದೆ.
ಹಾವೇರಿ ನಗರಸಭೆ ನೂತನ ಸದಸ್ಯರಿಗೆ ಸನ್ಮಾನ
ಹಾವೇರಿ: ಸ್ಥಳೀಯ ನಗರಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ನಗರದ 9ನೇ ವಾರ್ಡಿನ ಹನುಮಂತಪ್ಪ ಶರಸೂರಿ ಹಾಗೂ ಶಿವಬಸವ ವನಳ್ಳಿ ಅವರನ್ನು ಶಿವಾಜಿನಗರ ನಾಗರಿಕರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಸದಸ್ಯ ಹನುಮಂತಪ್ಪ ಶರಸೂರಿ, ಶಿವಾಜಿ ನಗರ ಸೇರಿದಂತೆ ನಗರದ 9ನೇ ವಾರ್ಡಿಗೆ ಸೇರುವ ಬಡಾವಣೆಯ ಬಹುತೇಕ ಜನರು ಮಧ್ಯಮ ವರ್ಗದವರಾಗಿದ್ದಾರೆ. ನಗರಸಭೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು. ಚಂದ್ರಶೇಖರ ಶಿಶುವಿನಹಳ್ಳಿ, ಸದಾನಂದ ಪಾಲನಕರ, ಮಸೂತಿ, ಶಿವಮೊಗ್ಗ ಮೇಸ್ತ್ರಿ, ಶಾಂತಾಬಾಯಿ ಶಿರೂರು, ಎಸ್.ಎನ್. ಸುಂಕದ, ಗೊಲಗುಂದಿ, ಮಲ್ಲೇಶ ಮುದಕಪ್ಪನವರ, ರಾಜು ಕೆರಮತ್ತಿಹಳ್ಳಿ, ಭೀಮಪ್ಪ ಲಿಂಗದಹಳ್ಳಿ, ವಿನಯ ಪಾಲನಕರ, ಸಿದ್ದು ಶರಸೂರಿ, ಹಜ್ಜು ಕಾಗಿನಲೆ, ನೌಷಾಧ್ ಖತೀಬ, ಬಸವರಾಜ ಲಿಂಗದಹಳ್ಳಿ, ರುದ್ರೇಶ ಕೋಳೂರು, ಬಸವರಾಜ ಬ್ಯಾಡಗಿ ಹಾಗೂ ಶಿವಾಜಿ ನಗರದ ನಾಗರಿಕರು ಪಾಲ್ಗೊಂಡಿದ್ದರು.