ನಾಳೆ ಹಾವೇರಿಗೆ ಶರಣ ಸಂಸ್ಕೃತಿ ರಥಯಾತ್ರೆ
ಹಾವೇರಿ: ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಶರಣ ಸಂಸ್ಕೃತಿ ಮಹಾರಥ ಯಾತ್ರೆ ಮಾ. 25ರಂದು ಬೆಳಗ್ಗೆ 10ಕ್ಕೆ ಹಾವೇರಿಗೆ ಆಗಮಿಸಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಕಂಚಾರಗಟ್ಟಿ ತುಂಗಭದ್ರಾ ನದಿ ಸೇತುವೆ ಬಳಿ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಗುವುದು. ಮಠಗಳ ಶ್ರೀಗಳು, ಅಖಿಲ ಭಾರತ ವೀರಶೈವ ಮಹಾಸಭಾದ ಘಟಕಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಘಟಕಗಳು, ಕದಳಿ ಹಾಗೂ ಅಕ್ಕಮಹಾದೇವಿ ಮಹಿಳಾ ಬಳಗಗಳು, ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಆಸಕ್ತರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಸಮಿತಿ ಮತ್ತು ರಾಜ್ಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹಾಯಾತ್ರೆ ಸಂಘಟಿಸಲಾಗಿದೆ ಎಂದರು.
ಬೆಳಗ್ಗೆ 10.15ಕ್ಕೆ ಹಾವನೂರು, 11ಕ್ಕೆ ಗುತ್ತಲ, 11.30ಕ್ಕೆ ನೆಗಳೂರು, 12ಕ್ಕೆ ಹೊಸರಿತ್ತಿ, 12.15ಕ್ಕೆ ಹಳೆರಿತ್ತಿ, ಮಧ್ಯಾಹ್ನ 1ಕ್ಕೆ ಸೋಮನಕಟ್ಟಿ ಮೂಲಕ ಹಾವೇರಿ ನಗರ ತಲುಪಲಿದೆ ಎಂದು ತಿಳಿಸಿದರು.