ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟನೆ
ರಾಣಿಬೆನ್ನೂರು: ಸರ್ಕಾರ ವಿವಿಧ ಯೋಜನೆಗಳ ಅಡಿ ಸಾಲ ಸೌಲಭ್ಯ ಪಡೆಯಲು ಫಲಾನುಭವಿಗಳು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ತರಬೇತಿ, ಮಾರ್ಗದರ್ಶನ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ತಾಲೂಕು ಕೃಷಿ ಅಧಿಕಾರಿ ಕೆ.ಆರ್. ಕುಡುಪಲಿ ಕರೆ ನೀಡಿದರು.
ಜಿಪಂ, ಜಲಾನಯನ ಅಭಿವೃದ್ಧಿ ಇಲಾಖೆ, ತಾಪಂದಿಂದ ತಾಲೂಕಿನ ಚಳಗೇರಿ ವಿಭಾಗದಿಂದ ಆಯ್ಕೆಯಾದ 900 ಸ್ವಸಹಾಯ ಸಂಘದ ಸದಸ್ಯರಿಗೆ ನೀಡ್ಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ ಯಾವ ಉದ್ಯಮಕ್ಕಾಗಿ ಸಾಲ ಪಡೆದಿದ್ದೀರೋ ಅದೇ ಉದ್ಯಮ ಆರಂಭಿಸಿ. ಸಕಾಲಕ್ಕೆ ಸಾಲ ಮರುಪಾವತಿಸಿ. ಸರ್ಕಾರ ಸಹಾಯಧನ ಸಮರ್ಪಕವಾಗಿ ದೊರೆತು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ, ಜಿಲ್ಲಾ ಸಂಯೋಜಕ ಮಂಜುನಾಥ ಹಲಗೇರಿ ಮಾತನಾಡಿ, ಜೈವಿಕ ಇಂಧನ ಬಳಕೆ ಹಾಗೂ ಉತ್ಪಾದನೆಗೆ ಸ್ವಸಹಾಯ ಸಂಘದ ಸದಸ್ಯರು ಮುಂದಾಗಬೇಕು. ಇದಕ್ಕೆ ಸರ್ಕಾರ ಕೋಟ್ಯಂತರ ರು. ಧನಸಹಾಯ ಮಾಡುತ್ತಿದೆ. ಸ್ವಸಹಾಯ ಸಂಘದವರು ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ. ಸ್ವದೇಶಿ ಉತ್ಪನ್ನಗಳ ಬಳಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
ಎಚ್.ಎಫ್. ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಸುಧೀರ್, ಉಷಾರಾಣಿ, ಕರಿಯಪ್ಪ, ತಿಪ್ಪೇಶ ಕನ್ನಮ್ಮನವರ, ಸಂತೋಷ ದೊಡ್ಡತಮ್ಮನವರ ಇದ್ದರು.