ಮುಖಂಡರ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 24
ವ್ಯಾಯಾಮ ಶಾಲೆ, ಶೌಚಾಲಯ ನಿರ್ಮಾಣ ಇನ್ನಿತರ ಬೇಡಿಕೆಗಳಿಗಾಗಿ ನಾಗರಿಕ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಆರಂಭವಾಗಿ ನಾಲ್ಕು ದಿನ ಗತಿಸಿದರೂ ಸ್ಥಳಕ್ಕೆ ಭೇಟಿ ನೀಡದ ಆಡಳಿತಾಧಿಕಾರಿ (ಹಾವೇರಿ ಉಪ ವಿಭಾಗಾಧಿಕಾರಿ) ವಿರುದ್ಧ ಘೋಷಣೆಗಳನ್ನು ಕೂಗಿದರು.
ಭಾನುವಾರ ಸ್ಥಳೀಯ ಹಳೇ ಪುರಸಭೆ ಬಳಿ ಜಿಲ್ಲಾಡಳಿತ, ತಾಲೂಕಾಡಳಿತ, ಪುರಸಭೆ ಹಾಗೂ ರಾಜಕೀಯ ನಾಯಕರುಗಳ ಪ್ರತಿಕೃತಿಗೆ ನೇಣು ಬಿಗಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರವೂ ಸಹ ಸಮಿತಿ ಸದಸ್ಯರು ಪಟ್ಟಣದ ವಿವಿದೆಡೆಗಳಲ್ಲಿ ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಪುರಸಭೆ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು.
ತಹಸೀಲ್ದಾರ್ ಸಂಧಾನ ವಿಫಲ: ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಸಂಜೀವಣ್ಣನವರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಅಶೋಕ ಯತ್ನಳ್ಳಿ ಧರಣಿ ಕೈಬಿಡುವಂತೆ ನಡೆಸಿದ ಮಾತುಕತೆ ವಿಫಲವಾಯಿತು.
ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಈಗಾಗಲೇ ಪುರಸಭೆ ಚುನಾವಣೆ ಮುಕ್ತಾಯವಾಗಿದ್ದು, ಕೆಲ ದಿನಗಳಲ್ಲಿ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ. ಧರಣಿಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು.
ಕಾರ್ಯಾಂಗದ ಮೇಲೆ ನಂಬಿಕೆಯಿಲ್ಲ: ಪ್ರತಿಭಟನೆ 4ನೇ ದಿನಕ್ಕೆ ಕಾಲಿರಿಸಿದ್ದರೂ ಸಂಬಂಧಿಸಿದ ಆಡಳಿತಾಧಿಕಾರಿ (ಹಾವೇರಿ ಉಪ ವಿಭಾಗಾಧಿಕಾರಿ) ಮಾತ್ರ ಇಂದಿಗೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಅಧಿಕಾರಿಯೇ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸಾರ್ವಜನಿಕರ ಬೇಡಿಕೆಗಳಿಗೆ ಮನ್ನಣೆ ಸಿಗುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಹಾದಿಯಲ್ಲೇ ಸಾಗುತ್ತಿರುವ ಅಧಿಕಾರಿಗಳ ವರ್ತನೆಯಿಂದ ಕಾರ್ಯಾಂಗ ವ್ಯವಸ್ಥೆ ಮೇಲೂ ಸಾರ್ವಜನಿಕರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮನೋಹರ ಅರ್ಕಾಚಾರಿ, ನೀಲಕಂಠಪ್ಪ ಮಾಳಗಿ, ಸಂತೋಷ ಗುದಗಿ, ಪಾಂಡುರಂಗ ಸುತಾರ, ಮಂಜುನಾಥ ಪೂಜಾರ, ವಿಜಯಕುಮಾರ ಶಿಡ್ಲಣ್ಣನವರ, ಎಸ್. ವಸಂತಕುಮಾರ, ಗುತ್ತೆಪ್ಪ ಪೂಜಾರ, ದಾದಾಪೀರ ಹರಿಹರ, ಮಲ್ಲೇಶ ತೆರೇದಹಳ್ಳಿ, ಸುರೇಶ ಡಾವಣಗೇರಿ, ಮಲ್ಲೇಶ ಬಿರಾದಾರ, ಇನ್ನಿತರರು ಪ್ರತಿಭಟನೆಯಲ್ಲಿಡಿದ್ದರು.