ಸಂಸ್ಕಾರ ಪಡೆಯದವರಿಂದ ಸಮಾಜಘಾತುಕ ಕೃತ್ಯ
ಬ್ಯಾಡಗಿ: ಧಾರ್ಮಿಕ ಸಂಸ್ಕಾರ ಪಡೆಯದ ವ್ಯಕ್ತಿಗಳಿಂದ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ. ಇದರಿಂದ ಸಮಾಜ ಕಲುಷಿತಗೊಂಡಿದ್ದು ಧರ್ಮಗಳ ನಡುವೆ ಯುದ್ಧವನ್ನೇ ಸಾರುವ ಸ್ಥಿತಿ ತಲುಪಿರುವುದು ವಿಪರ್ಯಾಸ ಎಂದು ಕಣ್ವಕುಪ್ಪಿ ಮಠದ ಮುಮ್ಮಡಿ ಶಾಂತಲಿಂಗ ಶ್ರೀ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದ ಮೂಕಪ್ಪಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಸೋಹ ಮಠದ ಧರ್ಮಾಧಿಕಾರಿ ಮೃಂತ್ಯುಂಜಯ ಶ್ರೀ ಮಾತನಾಡಿ, ಶ್ರೀ ಮಠದ ವತಿಯಿಂದ ಗೋಶಾಲೆ ಆರಂಭಿಸುವ ಮಹತ್ತರ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕಾಮಧೇನು ಎಂಬ ಹೆಸರಿನಲ್ಲಿ ಗೋಶಾಲೆ ಆರಂಭಿಸಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಪ್ರವಚನ ಪ್ರವೀಣೆ ನೇತ್ರಾವತಿ ಹಿರೇಮಠ, ಸರ್ಕಾರಿ ಅಭಿಯೋಜಕ ವಿ.ಜಿ. ಯಳಗೇರಿ, ಪ್ರಕಾಶ ಬಳಿಗಾರ, ಸುಭಾಶ ಚಂದ್ರ ಹಕ್ಕಳಿ ಅವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ದಂಪತಿಗಳಿಂದ ಮೂಕಪ್ಪ ಶ್ರೀಗಳ 3ನೇ ವರ್ಷದ ತುಲಾಭಾರ ನೆರವೇರಿತು. ಮಾಜಿ ಶಾಸಕ ರಾಜಶೇಖರ ಸಿಂಧೂರ ದಂಪತಿ ವಿಶಿಷ್ಟ ಲೋಹದಿಂದ ತಯಾರಿಸಿದ ತಕ್ಕಡಿಯೊಂದನ್ನು ಶ್ರೀ ಮಠಕ್ಕೆ ದೇಣಿಗೆಯಾಗಿ ನೀಡಿದರು.
ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ, ಜಗದೀಶ ಕಣಗಿಲಬಾವಿ, ಮಾಜಿ ಸದಸ್ಯ ಹುಚ್ಚನಗೌಡ ಲಿಂಗನಗೌಡ್ರ, ಗ್ರಾಪಂ ಅಧ್ಯಕ್ಷೆ ನೇತ್ರಾ ಜಾಡರ, ವೀರಭದ್ರಪ್ಪ ಗೊಡಚಿ, ಸಿದ್ದಪ್ಪ ಹಂಪಣ್ಣನವರ, ಸುಭಾಸ ಹೊಂಕಣ, ಹುಚ್ಚಯ್ಯ ಹಮ್ಮಿಗಿ, ಪ್ರಭುಗೌಡ ಪಾಟೀಲ, ಎಂ.ಎನ್. ಚಿದಂಬರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿವಯ್ಯ ದಾಸೋಹಮಠ ಸ್ವಾಗತಿಸಿದರು. ಎಸ್.ಬಿ. ಗಾಣಿಗೇರ ನಿರೂಪಿಸಿದರು. ಶಿವಾನಂದಯ್ಯ ದಾಸೋಹ ಮಠ ಕಾರ್ಯಕ್ರಮ ನಿರ್ವಹಿಸಿದರು.