ಸಮಾವೇಶದಿಂದ ಪರೀಕ್ಷೆಗೆ ತೊಂದರೆ: ಆಕ್ರೋಶ
ಹಾವೇರಿ: ಮೊರಾರ್ಜಿ ಹಾಗೂ ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಭಾನುವಾರ ನಡೆದ ಪರೀಕ್ಷೆಗೆ ಬಿಜೆಪಿ ಸಮಾವೇಶದಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಪಾಲಕರು ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದೆ.
ಪರೀಕ್ಷಾ ಕೇಂದ್ರ ಸಮೀಪ ಸಮಾವೇಶ: ರಾಜ್ಯಾದ್ಯಂತ ಇರುವ ವಸತಿ ಶಾಲೆಗಳಿಗೆ ಭಾನುವಾರ ಪರೀಕ್ಷೆ ನಡೆಸುವ ಕುರಿತಂತೆ ದಿನ ನಿಗದಿಗೊಳಿಸಲಾಗಿತ್ತು. ಅಲ್ಲದೇ ಜಿಲ್ಲಾದ್ಯಂತ ಈ ಕುರಿತಂತೆ ಸಕಲ ಸಿದ್ಧತೆಗಳನ್ನು ಕಳೆದ ವಾರದಿಂದಲೂ ನಡೆಸಲಾಗಿತ್ತು. ಪರೀಕ್ಷಾ ಕೇಂದ್ರಗಳಾಗಿ ಹಾವೇರಿ ನಗರದ ಮೂರು ಕಡೆಗಳಲ್ಲಿ ಪರೀಕ್ಷೆ ನಡೆಸಲಾಯಿತು.
ಆಕ್ರೋಶ: ಆದರೆ, ಅತಿದೊಡ್ಡ ಕೇಂದ್ರ ಎಂಬ ಕಾರಣಕ್ಕೆ ಜಿಲ್ಲಾ ಕ್ರೀಡಾಂಗಣಕ್ಕೆ ಹೊಂದಿಕೊಂಡೇ ಇರುವ ಮುನ್ಸಿಪಲ್ ಹೈಸ್ಕೂಲ್ನಲ್ಲಿ 300 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಆದರೆ, ಇದೇ ಸಂದರ್ಭ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶಕ್ಕೆ ಅವಕಾಶ ಕೊಟ್ಟಿದ್ದು ವಸತಿ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಮಕ್ಕಳ ಪಾಲಕರಲ್ಲಿ ಆಕ್ರೋಶ ಉಂಟು ಮಾಡಿತು.
ಪ್ರತಿರೋಧ: ಪರೀಕ್ಷಾ ತೊಂದರೆಯಿಂದ ಕೋಪೋದ್ರಿಕ್ತರಾದ ಪಾಲಕರು ಕ್ರೀಡಾಂಗಣದಲ್ಲಿ ಜರುಗುತ್ತಿರುವ ಬಿಜೆಪಿ ಸಮಾವೇಶ ತಡೆಯಲು ಯತ್ನಿಸಿದರಾದರೂ ಅದರಿಂದ ವಿಫಲರಾದರು. ಒಂದು ಹಂತದಲ್ಲಿ ಮುಖ್ಯ ವೇದಿಕೆ ಹಿಂದಿನ ಭಾಗದಲ್ಲಿ ಪಾಲಕರು ಕಾರ್ಯಕ್ರಮಕ್ಕೆ ತಡೆ ಒಡ್ಡಲು ತೀವ್ರವಾಗಿ ಯತ್ನಿಸಿದರೂ ಫಲ ಸಿಗದೇ ಕಂಗಾಲಾಗಿ ಕೊಂಚ ಪ್ರತಿರೋಧ ತೋರಿ ಹಿಂದಿರುಗಿದರು. ಬಿಜೆಪಿ ಸಮಾವೇಶದಲ್ಲಿ ಮುಖ್ಯಮಂತ್ರಿ, ಇತರ ಗಣ್ಯರು ಪಾಲ್ಗೊಂಡಿದ್ದರಿಂದ ಬಂದೋಬಸ್ತ್ ಹೆಚ್ಚಾಗಿತ್ತು. ಇದರಿಂದಾಗಿ ಪಾಲಕರ ಕೂಗು ಗಣ್ಯರಿಗೆ ಕೇಳಿಸಲೇ ಇಲ್ಲ. ಈ ಕುರಿತಂತೆ ಪಾಲಕರೋರ್ವರು ಪರೀಕ್ಷೆ ಸಂದರ್ಭದಲ್ಲಿ ಇಲ್ಲಿ ಸಮಾವೇಶ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ಯಾಕೆ? ಪರೀಕ್ಷೆ ಮುಗಿಯುವವರೆಗೂ ಕಾರ್ಯಕ್ರಮ ಆರಂಭಿಸದಂತೆ ಧ್ವನಿ ಎತ್ತಿದರಾದರೂ ಅದು ಪೊಲೀಸ್ ಬಲದ ಮುಂದೆ ಕ್ಷೀಣವಾಯಿತು. ಏರುತ್ತಿರುವ ಬಿಸಿಲು ಹಾಗೂ ವಸತಿ ಶಾಲೆಗಳ ಪರೀಕ್ಷೆ 1ಕ್ಕೆ ಮುಗಿಯಬೇಕಾದದ್ದು ಆಗುತ್ತಿರುವ ಮೈಕ್ ಸೌಂಡ್ನಿಂದಾಗಿ ಮಕ್ಕಳು ಕಿರಿಕಿರಿ ಅನುಭವಿಸಿ ಮನದಲ್ಲೇ ಬೈದುಕೊಳ್ಳುತ್ತಾ ಮನೆ ಕಡೆ ಹೆಜ್ಜೆ ಹಾಕಿದರು. ಮಕ್ಕಳ ಭವಿಷ್ಯ ನಿರ್ಮಿಸಬೇಕಾದ ಈ ಪರೀಕ್ಷೆ ಹಾಳಾಗಿದ್ದಕ್ಕೆ ಬಿಜೆಪಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಪಾಲಕರು ಮನಸಾರೆ ಶಪಿಸುತ್ತ ಮನೆ ಕಡೆಗೆ ನಡೆದರು.