2014ಕ್ಕೆ ಪೋಲಿಯೋ ಪ್ರಮಾಣಪತ್ರ
ರಾಣಿಬೆನ್ನೂರು: ದೇಶಾದ್ಯಂತ ಸುಮಾರು 28 ವರ್ಷಗಳ ಕಾಲ 0 ದಿಂದ 6 ವರ್ಷದೊಳಗಿನ ಕೋಟ್ಯಂತರ ಮಕ್ಕಳಿಗೆ ರೋಟರಿ ಸಂಸ್ಥೆ ಕಾರ್ಯಕರ್ತರು ಪೋಲಿಯೋ ರೋಗ ನಿರ್ಮೂಲನೆಗಾಗಿ, ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದರ ಫಲವಾಗಿ ಜನವರಿ 2014ರಂದು ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋ ಮುಕ್ತ ಭಾರತವೆಂದು ಪ್ರಮಾಣಪತ್ರ ನೀಡಲು ನಿರ್ಧರಿಸಿದೆ ಎಂದು 310ನೇ ರೋಟರಿ ಜಿಲ್ಲಾ ಗೌವರ್ನರ್ ಡಾ. ಜಾರ್ಸನ್ ಫರ್ನಾಂಡಿಸ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾನ ಮನಸ್ಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಸದಸ್ಯರಿಂದ ಕೂಡಿರುವ ರೋಟರಿ ಸಂಸ್ಥೆಯು ದೇಶದ ಘನತೆ ಗೌರವ ಹಾಗೂ ಅಭಿವೃದ್ಧಿಗೆ ಮಾರಕವಾಗಿದ್ದ ಪೋಲಿಯೋ ರೋಗವನ್ನು ಬೇರು ಸಮೇತ ಕಿತ್ತು ಹಾಕುವುದಕ್ಕಾಗಿ ಕಳೆದ 28 ವರ್ಷಗಳಿಂದ ದೇಶದ ಪ್ರತಿಯೊಂದು ಊರು-ಕೇರಿಗಳಲ್ಲಿನ 0-6 ವರ್ಷದೊಳಗಿನ ಕೋಟ್ಯಂತರ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ, ರೋಟರಿ ಸದಸ್ಯರು ಯಾವುದೇ ಫಲಾಪೆಕ್ಷೆ ನಿರೀಕ್ಷಿಸದೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸುಮಾರು 28 ವರ್ಷಗಳ ಕಾಲ ನಡೆಸುತ್ತಾ ಬಂದಿದ್ದರ ಫಲವಾಗಿ ಇಂದು ದೇಶಾದ್ಯಂತ ಪೋಲಿಯೋ ರೋಗ ಇಲ್ಲದಂತಾಗಿರುವುದನ್ನು ಗಮನಿಸಿರುವ ವಿಶ್ವ ಆರೋಗ್ಯ ಸಂಸ್ಥೆ- 2014ನೇ ಜನವರಿಯಲ್ಲಿ ಪೋಲಿಯೋ ಮುಕ್ತ ಭಾರತವೆಂದು ಪ್ರಮಾಣಪತ್ರವನ್ನು ದೇಶಕ್ಕೆ ನೀಡಲು ನಿರ್ಧರಿಸಿದೆ.
310ನೇ ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಗೋವಾ, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ 128 ರೋಟರಿ ಕ್ಲಬ್.ಗಳು ಕಾರ್ಯನಿರ್ವಹಿಸುತ್ತಿವೆ. ತಮ್ಮ ಕಾರ್ಯಕ್ಷೇತ್ರದಲ್ಲಿನ ಸಮಸ್ತ ಜನರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಹಾಗೂ ತುರ್ತು ಸಮಯದಲ್ಲಿ ಬೇಕಾಗುವ ರಕ್ತವನ್ನು ಪೋರೈಸುವುದಕ್ಕಾಗಿ, ಹುಬ್ಬಳ್ಳಿ, ಕಾರವಾರ, ಕೊಲ್ಲಾಪುರ, ಕುಮಟಾ ಹಾಗೂ ಗೋಕಾಕ ನಗರಗಳಲ್ಲಿ ಬ್ಲಡ್ ಬ್ಯಾಂಕ್.ಗಳನ್ನು ಸ್ಥಾಪಿಸಿದ್ದು, ದಿನದ 24 ಗಂಟೆಗಳಲ್ಲಿ ಸೇವೆ ಸಲ್ಲಿಸುವಂತಹ ವಾತಾವರಣ ನಿರ್ಮಿಸಲಾಗಿದೆ.
ದೇಶದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ತರಬೇತಿಗಳನ್ನು ಏರ್ಪಡಿಸಿ ತರಬೇತಿಗಳನ್ನು ನೀಡಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಣಿಬೆನ್ನೂರು ರೋಟರಿ ಸಂಸ್ಥೆಯ ಅರವಿಂದ ಜೈನ್, ಡಾ. ಬಿ.ಜೆ. ಹಿರೇಮಠ, ಪ್ರಭಾಕರ ಮಂಗಳೂರು, ವೀರೇಶ ಹನಗೋಡಿಮಠ, ಪಿ.ಎಸ್. ಕುಲಕರ್ಣಿ, ಕೆ.ವಿ. ಶ್ರೀನಿವಾಸ ಉಪಸ್ಥಿತರಿದ್ದರು.