ಆಯುಧ ಒಪ್ಪಿಸಲು ಸೂಚನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 25
ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ- 2013ರ ಅಂಗವಾಗಿ ಮಾ. 2ರಿಂದ ಮೇ. 11ರ ವರೆಗೆ ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಲೈಸನ್ಸ್ ಹೊಂದಿರುವ ಆಯುಧವುಳ್ಳ ಲೈಸನ್ಸ್.ದಾರರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕಡ್ಡಾಯವಾಗಿ ಡಿಪಾಜಿಟ್ ಮಾಡುವಂತೆ ಸೂಚನೆ ನೀಡಿ, ಆಯುಧಗಳನ್ನು ಜೊತೆಗಿಟ್ಟುಕೊಂಡು ತಿರುಗಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಾರಣ ಲೈಸನ್ಸ್.ದಾರರು ತಾವು ಹೊಂದಿರುವ ಆಯುಧಗಳನ್ನು ಪೊಲೀಸ್ ಠಾಣೆಯಲ್ಲಿ ಡಿಪಾಜಿಟ್ ಮಾಡಿದ ಬಗ್ಗೆ ಅಗತ್ಯ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು ಮತ್ತು ಚುನಾವಣೆ ಪ್ರಕ್ರಿಯೆ ಮುಗಿದು ಫಲಿತಾಂಶ ಹೊರಬಿದ್ದ ಒಂದು ವಾರದ ನಂತರ ಹಿಂಪಡೆಯಬೇಕೆಂದು ತಿಳಿಸಿದ್ದಾರೆ.
ಈ ಆದೇಶವು ಸರ್ಕಾರಿ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಅನ್ವಯಿಸುವುದಿಲ್ಲ. ಅಲ್ಲದೇ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳ, ಹಣಕಾಸು ಸಂಸ್ಥೆಗಳ ಸುರಕ್ಷತೆಗಾಗಿ ಪಡೆದುಕೊಂಡ ಲೈಸನ್ಸ್.ದಾರರಿಗೆ ಅನ್ವಯಿಸುವುದಿಲ್ಲ. ಈ ಆದೇಶ ಉಲ್ಲಂಘಿಸಿದವರನ್ನು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಾಯ್ದೆ 1973 ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.