ಏ. 14ರಂದು ಶರಣ ಸಂಸ್ಕೃತಿ ಯಾತ್ರೆ ಸಮಾರೋಪ
ಹಾವೇರಿ: ರಾಜ್ಯಾದ್ಯಂತ ಸಂಚರಿಸುತ್ತಿರುವ ಶರಣ ಸಂಸ್ಕೃತಿ ಮಹಾರಥ ಯಾತ್ರೆ ಏ. 14, ಅಂಬೇಡ್ಕರ್ ಜಯಂತಿಯಂದು ಕೂಡಲ ಸಂಗಮದಲ್ಲಿ ಸಮಾರೋಪಗೊಳ್ಳಲಿದೆ. ತನ್ಮೂಲಕ ಬಸವಣ್ಣನವರ ಅರಿವು, ಅಂಬೇಡ್ಕರ್ ಆಚಾರವನ್ನು ಸೇರಿಸುವ ಮೂಲಕ ಸಮಾಜದ ಮನಸ್ಸುಗಳನ್ನು ಕಟ್ಟುವ ಯತ್ನ ಇದಾಗಿದೆ. ಇದಕ್ಕಾಗಿ ಎಲ್ಲರೂ ಒಂದಾಗಬೇಕಿದೆ ಎಂದು ಬಸವ ಸಮಿತಿ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ಕರೆ ನೀಡಿದರು.
ಸಂಸ್ಕೃತಿ ಮಹಾಯಾತ್ರೆಯ ಬಸವ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿ, ನಗರದ ಹುಕ್ಕೇರಿಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಫ.ಗು. ಹಳಕಟ್ಟಿ ಅವರು ವಚನಗಳನ್ನು ಗ್ರಂಥಗಳಾಗಿ ಸಾರ್ವತ್ರಿಕಗೊಳಿಸಿದ್ದು ಶ್ಲಾಘನೀಯ ಕಾರ್ಯ. ಪ್ರಸ್ತುತ ಸಮಾಜಕ್ಕೆ ಪುರಾಣ ಸಂಸ್ಕೃತಿಯ ಅಗತ್ಯವಿದೆ. ಇದರೊಂದಿಗೆ ಬದುಕನ್ನು ಪ್ರೀತಿಸಿ, ಗೌರವಿಸುವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಬಸವ ಜಯಂತಿಯ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಈ ಶರಣ ಸಂಸ್ಕೃತಿ ಮಹಾಯಾತ್ರೆ ಆಯೋಜಿಸಲಾಗಿದ್ದು, ರಾಜ್ಯದ ಪ್ರತಿ ಜಿಲ್ಲೆಗೂ ಈ ಮಹಾಯಾತ್ರೆ ಸಂಚರಿಸಲಿದೆ ಎಂದರು.
ಅದ್ಧೂರಿ ಸ್ವಾಗತ: ಇದಕ್ಕೂ ಮುನ್ನ ತಾಲೂಕಿನ ಕಂಚಾರಗಟ್ಟಿಯ ಬಳಿ ಜಿಲ್ಲೆಗೆ ಪ್ರವೇಶಿಸಿದ ಮಹಾರಥವನ್ನು ಹುಕ್ಕೇರಿಮಠದ ಸದಾಶಿವ ಶ್ರೀಗಳು, ಗುತ್ತಲದ ಸಂಗನಬಸವ ಶ್ರೀ, ಹೊಸರಿತ್ತಿ ಗುದ್ದಲೀಶ್ವರ ಶ್ರೀ, ಲಿಂಗನಾಯಕನಹಳ್ಳಿ-ಹೂವಿನ ಶಿಗ್ಲಿಯ ಚನ್ನವೀರ ಶ್ರೀಗಳು, ಗುಡ್ಡದ ಆನ್ವೇರಿಯ ಶಿವಯೋಗಿ ಶ್ರೀ, ಹಾವನೂರ ದಳವಾಯಿಮಠದ ಶಿವಕುಮಾರ ಶ್ರೀ, ಹೊಸಮಠದ ಶಾಂತಲಿಂಗ ಶ್ರೀಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್, ಶಾರದಾ ಜತ್ತಿ, ಜಗನ್ನಾಥ ಪನಸಾಲಿ, ಪಿ.ಡಿ. ಶಿರೊರ, ವೀರಣ್ಣ ಅಂಗಡಿ, ಪ್ರಭು ಹಿಟ್ನಳ್ಳಿ, ವೀರಣ್ಣ ಕೋರಿ, ಐ.ಎಂ. ಮರಡೆಣ್ಣನವರ, ಯರೇಶಿಮಿ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡು ಸ್ವಾಗತಿಸಿದರು.
ಕೇರಳದ ಲಿಂಗಾಯತರು
ಕೇರಳ ರಾಜ್ಯದಲ್ಲಿ ಇಂದಿಗೂ 15 ಲಕ್ಷ ಲಿಂಗಾಯತರು ಅಸ್ಪಶ್ಯರಂತೆ ಬದುಕುತ್ತಿದ್ದಾರೆ. ಅವರೆಲ್ಲರಿಗೂ 12ನೇ ಶತಮಾನದಲ್ಲೇ ಯಡಿಯೂರ ಸಿದ್ದಲಿಂಗೇಶ್ವರರು ಲಿಂಗಧಾರಣೆ ಮಾಡಿದ್ದಾರೆ. ಅರಿವಿನ ಕೊರತೆಯಿಂದಾಗಿ ಇಂದಿಗೂ ಅವರು ಅಸಹನೀಯ ಬದುಕು ನಡೆಸುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ಸಾಂಗತ್ಯ ಅಗತ್ಯವಿದೆ. ಅವರಲ್ಲಿ ಮನೋಬಲ ತುಂಬಿ ಅರಿವಿನ ಬಲ ಜಾಗೃತಗೊಳಿಸುವ ಮೂಲಕ ಸಮಾಜ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಿದೆ ಎಂದು ಬಸವ ಸಮಿತಿ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ನುಡಿದರು.