ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಗರಿಕ ಹೋರಾಟ ಸಮಿತಿ ಧರಣಿ ಅಂತ್ಯ

Rashmi Kasaragodu
Updated On : 26 Mar 2013, 10:50 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 25
ಆಡಳಿತಾಧಿಕಾರಿ (ಹಾವೇರಿ ಉಪವಿಭಾಗಾಧಿಕಾರಿ) ನೀಡಿದ ಲಿಖಿತ ಭರವಸೆ ಮೇಲೆ ಮಧ್ಯಸ್ಥಿಕೆ ನಡುವೆ ನಾಲ್ಕು ದಿನಗಳಿಂದ ನಾಗರಿಕ ಹೋರಾಟ ಸಮಿತಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿತು.
ವ್ಯಾಯಾಮ ಶಾಲೆ, ಶೌಚಾಲಯ ನಿರ್ಮಾಣ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಸ್ಥಳೀಯ ನಾಗರಿಕ ಹೋರಾಟ ಸಮಿತಿ ನಾಲ್ಕು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಿತ್ತು. ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗುವ ಮೂಲಕ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡಿತ್ತು.
ಪ್ರತಿಭಟನಾ ಸ್ಥಳಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ ಆಡಳಿತಾಧಿಕಾರಿ ಕೆ. ಚನ್ನಬಸಪ್ಪ ಶೌಚಾಲಯ ನಿರ್ಮಾಣ ಹಾಗೂ ವ್ಯಾಯಾಮ ಶಾಲೆ ಆರಂಭಿಸುವ ಕುರಿತು ಲಿಖಿತ ಭರವಸೆ ನೀಡುವ ಮೂಲಕ ಪ್ರತಿಭಟನಾ ನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು.
ಮಾತಿನ ಚಕಮಕಿ: ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ ನೀಡಿದಾಗ ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ವಾಗ್ವಾದ ನಡೆಸಿದರು. ಪ್ರತಿಭಟನಾಕಾರರ ಬೇಡಿಕೆ ನ್ಯಾಯಸಮ್ಮತವಾಗಿದೆ. ಆದರೆ ಪ್ರತಿಭಟನೆ ಆರಂಭವಾಗಿ 4 ದಿನ ಗತಿಸಿದರೂ ಸ್ಥಳಕ್ಕೆ ಏಕೆ ಭೇಟಿ ನೀಡಲಿಲ್ಲ? ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ತಾವು ನಿರ್ಲಕ್ಷ್ಯ ತೋರಿದ್ದೀರಿ. ಕಾರ್ಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ಬೇಡಿಕೆಗಳಿಗೆ ಮನ್ನಣೆ ಸಿಗುತ್ತಿಲ್ಲ. ಅಧಿಕಾರಿಗಳ ವರ್ತನೆಯಿಂದ ಇಡೀ ವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಅಡ್ಡಿ: ಆಡಳಿತಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ, ಪ್ರತಿಭಟನಾಕಾರರ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದರೂ ಏನೂ ಮಾಡದ ಸ್ಥಿತಿಯಲ್ಲಿ ನಾವಿದ್ದೇವೆ. ಚುನಾವಣೆ ಕೆಲಸಗಳ ಒತ್ತಡದಲ್ಲಿದ್ದ ಕಾರಣ ಸ್ಥಳಕ್ಕೆ ಭೇಟಿ ನೀಡುವಲ್ಲಿ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.
ಮನೋಹರ ಅರ್ಕಾಚಾರಿ, ನೀಲಕಂಠಪ್ಪ ಮಾಳಗಿ, ಸಂತೋಷ ಗುದಗಿ, ಪಾಂಡುರಂಗ ಸುತಾರ, ಮಂಜುನಾಥ ಪೂಜಾರ, ವಿಜಯಕುಮಾರ ಶಿಡ್ಲಣ್ಣನವರ, ಎಸ್. ವಸಂತಕುಮಾರ, ಗುತ್ತೆಪ್ಪ ಪೂಜಾರ, ದಾದಾಪೀರ ಹರಿಹರ, ಮಲ್ಲೇಶ ತೆರೇದಹಳ್ಳಿ, ಸುರೇಶ ಡಾವಣಗೇರಿ, ಮಲ್ಲೇಶ ಬಿರಾದಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement