ಮಕ್ಕಳಲ್ಲಿ ಉತ್ತಮ ವಿಚಾರ ಬೆಳೆಸಿ
ಹಾವೇರಿ: ಮನಸ್ಸಿನ ಹಿಡಿತ ಸಾಧಿಸಿದ ವ್ಯಕ್ತಿ ಪ್ರಪಂಚವನ್ನೇ ಗೆಲ್ಲಬಹುದು. ಶಿಕ್ಷಣ ಒಂದು ಶಕ್ತಿಯಾಗಿದ್ದು, ಶಿಕ್ಷಕರು ಪ್ರಾರಂಭದಿಂದಲೇ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುವುದರ ಮೂಲಕ ಉತ್ತಮ ಆಚಾರ, ವಿಚಾರ, ರೂಢಿಗಳನ್ನು ಬೆಳೆಸಬೇಕು ಎಂದು ಬ್ರಹ್ಮಕುಮಾರಿ ವಿದ್ಯಾಲಯದ ಪದ್ಮಾಜಿ ಸಲಹೆ ಮಾಡಿದರು.
ಬ್ಯಾಡಗಿ ತಾಲೂಕು ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೌಲ್ಯ ಶಿಕ್ಷಣದ ಕುರಿತು ಉಪನ್ಯಾಸದಲ್ಲಿ ಮಾತನಾಡಿದ ಅವರು, ಚಿನ್ನಕ್ಕೆ ರೂಪ ಕೊಟ್ಟಾಗ ಅದು ಒಡವೆಯಾಗುವುದು. ಒಂದು ಬಂಡೆಗೆ ರೂಪ ಕೊಟ್ಟಾಗ ಅದು ಶಿಲೆಯಾಗುವುದು ಅದೇ ರೀತಿಯಾಗಿ ಮೌಲ್ಯಯುತ ಶಿಕ್ಷಣ ಕೊಟ್ಟಾಗ ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಮಕ್ಕಳಿಗೆ ಸ್ವಾತಂತ್ರ್ಯ ಕೊಡುವುದರ ಮೂಲಕ ಅವರನ್ನು ಸೃಜನಶೀಲರನ್ನಾಗಿ ಮಾಡಬೇಕು. ಮೌಲ್ಯಶಿಕ್ಷಣ ಕೇವಲ ಕಲಿಕೆಯಾಗದೆ ಅದನ್ನು ಜೀವನವೆಂಬ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಕುಂಠಿತವಾಗುತ್ತಿದ್ದು ಅತ್ಯಾಚಾರ, ಅನಾಚಾರ ಘಟನೆಗಳೇ ಇದಕ್ಕೆ ಸಾಕ್ಷಿ ಎಂದರು.
ಪ್ರಾಚಾರ್ಯ ಆರ್.ವಿ ಚನ್ನಕೋಟಿಮಠ ಅಧ್ಯಕ್ಷತೆ ವಹಿಸಿದ್ದರು. ಬಿಬಿಎಂ ಪ್ರಾಚಾರ್ಯ ರುದ್ರದೇವರಮಠ, ಉಪನ್ಯಾಸಕ ಗಣೇಶ ಜಗದ್, ಶ್ರೀಕಾಂತ ಆರ್.ಜಿ, ರೂಪಾ ಪಸಾರದ, ಮೃತ್ಯುಂಜಯ ಎಸ್., ಮೋಹನ್, ಶಂಭುಲಿಂಗ ಅಕ್ಕಿ, ವಿನಯಕುಮಾರ ಬಾರಂಗಿ ಗುರುರಾಜ ಬಿದರಿ ಇತರರು ಇದ್ದರು.