ಸ್ತ್ರೀ ಭ್ರೂಣಹತ್ಯೆಗೈದರೆ ಕಠಿಣ ಶಿಕ್ಷೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 25
ಸ್ತ್ರೀ ಭ್ರೂಣಹತ್ಯೆಗೆ ಸಮಾಜದಲ್ಲಿ ಪ್ರಜ್ಞಾವಂತ ಸಾರ್ವಜನಿಕರೇ ಮುಂದಾಗುತ್ತಿರುವುದು ವಿಷಾದನೀಯ. ಇಂಥ ಅಪರಾಧದಲ್ಲಿ ಪಾಲ್ಗೊಳ್ಳುವ ಹಾಗೂ ಅದಕ್ಕೆ ಸಹಕರಿಸುವ ಎಲ್ಲರಿಗೂ ಕಾನೂನು ಕಠಿಣ ಶಿಕ್ಷೆ ವಿಧಿಸಲಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಸ್ತ್ರೀ ಭ್ರೂಣಹತ್ಯೆ ಕಾನೂನು ಪ್ರಾಧಿಕಾರ ಆಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ತ್ರೀ ಭ್ರೂಣಹತ್ಯೆ ಕಾನೂನು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಅಗತ್ಯ: ಲಿಂಗಾನುಪಾತದ ಅಂಕಿ-ಅಂಶಗಳಲ್ಲಿ ಸ್ತ್ರೀ, ಪುರುಷರು ಸಮಾನವಾಗಿಲ್ಲ. ಅದನ್ನು ಸರಿದೂಗಿಸಲು ಸಕಲ ಪ್ರಯತ್ನಗಳು ಸಾಗಿವೆ. 2021ರ ಹೊತ್ತಿಗೆ ಸ್ತ್ರೀ-ಪುರುಷರ ಲಿಂಗಾನುಪಾತ ಸರಿದೂಗಬಹುದು. ಸಮಾಜದಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆಯಾದರೆ, ಅದರಿಂದ ಸಮಾಜಕ್ಕೆ ದುಷ್ಪರಿಣಾಮ ಹೆಚ್ಚಾಗಲಿದೆ. ಸ್ತ್ರೀ ಭ್ರೂಣಹತ್ಯೆ ಕಾನೂನಿನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದರು.
ಭ್ರೂಣ ಪತ್ತೆ ಅಕ್ಷಮ್ಯ: ಪುರುಷ, ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ 1994 ಕಾಯ್ದೆಯನ್ನು 1996 ಜ. 1ರಿಂದ ಜಾರಿಗೆ ತರಲಾಯಿತು. ಈ ಕಾಯ್ದೆ ಜಾರಿಯಾದ ಮೇಲೆ ಲಿಂಗಪತ್ತೆ ಮಾಡುವ ಉದ್ದೇಶದಿಂದ ಭ್ರೂಣವನ್ನು ಸ್ಕ್ಯಾನಿಂಗ್ ಮೂಲಕ ಪತ್ತೆ ಮಾಡುವುದು ಅಕ್ಷಮ್ಯ ಎಂದರು.
ಮಕ್ಕಳ ಲಿಂಗಾನುಪಾತವೂ ಕ್ಷೀಣ: ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಸ್ತ್ರೀ ರೋಗ ತಜ್ಞ ಡಾ. ಈಶ್ವರ ಮಾಳೋದೆ ಮಾತನಾಡಿ, ದೇಶದಲ್ಲಿ 1991ರಲ್ಲಿ ಪ್ರತಿ ಸಾವಿರ ಪುರುಷರಿಗೆ 972 ಮಹಿಳೆಯರಿದ್ದರು. 2001ರಲ್ಲಿ ಇದರ ಪ್ರಮಾಣ 942 ಮತ್ತು 2011ರಲ್ಲಿ 940ಕ್ಕೆ ಇಳಿದಿದೆ ಎಂದು ವಿವರಿಸಿದರು. ಕರ್ನಾಟಕದಲ್ಲಿ ಮಹಿಳೆಯರ ಅನುಪಾತ 963 ಇದೆ. ಅದರಲ್ಲೂ 6 ವರ್ಷಕ್ಕಿಂತ ಕಡಿಮೆ ವಯೋವಾನದ ಮಕ್ಕಳಲ್ಲಿ ಈ ಲಿಂಗ ಅನುಪಾತವು ಜಾಸ್ತಿಯಾಗುತ್ತಿದೆ ಎಂದು ವಿಷಾದಿಸಿದರು.
ಪಾಲಕರೇ ಕಾರಣ: ಸಮಾಜದಲ್ಲಿ ಮಹಿಳೆಯರ ಪ್ರಮಾಣ ಇಳಿಮುಖಕ್ಕೆ ತಂದೆ-ತಾಯಿ ಹಾಗೂ ಸಮಾಜದ ಅಲಕ್ಷ್ಯ ಹಾಗೂ ಹೆಣ್ಣು ಶಿಶುಗಳು ಅಕಾಲಿಕ ಸಾವು ಕಾರಣವಾಗಿದೆ. ಅಲ್ಲದೇ ಹೆಣ್ಣು ಮಕ್ಕಳಲ್ಲಿರುವ ಅನಕ್ಷರತೆಯೂ ಪ್ರಮುಖ ಅಂಶ. ವಿವಾಹ ವೆಚ್ಚ ಮತ್ತು ವರದಕ್ಷಿಣೆ ಪದ್ಧತಿಗಳು ಮಹಿಳೆಯ ಸಂಖ್ಯೆ ಕುಂಠಿತವಾಗಲು ಕಾರಣವಾಗಿವೆ ಎಂದರು.
ಅತ್ಯಾಚಾರ ವಿಷಾದನೀಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಮಾತನಾಡಿ, ಮಹಿಳೆ ಮತ್ತು ಪುರುಷರ ಅಸಮತೋಲನ ಅನುಪಾತದಿಂದ ಮಹಿಳೆಯರ ಮೇಲಿನ ಅತ್ಯಾಚಾರದಂತಹ ದೌರ್ಜನ್ಯಗಳು ಅಧಿಕವಾಗುತ್ತಿವೆ. ಮಹಿಳೆಯರ ಪ್ರಮಾಣ ಕಡಿಮೆಯಿಂದ ಸಾಮಾಜಿಕ ವ್ಯವಸ್ಥೆಗೆ ಮಾರಕ. ದೇಶದಲ್ಲಿ ಅಶಾಂತಿ ಅಭದ್ರತೆ ಹೆಚ್ಚಾಗಿ, ದೇಶದ ಪ್ರಗತಿಗೆ ಹಿನ್ನೆಡೆಯಾಗಲಿದೆ ಎಂದು ಅಸಮತೋಲನ ಅನುಪಾತದ ಪರಿಣಾಮಗಳನ್ನು ತಿಳಿಸಿದರು.
ಅರಿವು ಮೂಡಿಸಿ: ಸ್ವಯಂಸೇವಾ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ಎಲ್ಲ ಹಂತಗಳ ಜನಪ್ರತಿನಿಧಿಗಳು, ಸಮುದಾಯದ ಮುಖಂಡರು ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಹಾಗೂ ಹೆಣ್ಣು ಭ್ರೂಣಹತ್ಯೆಯ ದುಷ್ಪರಿಣಾಮಗಳ ಅರಿವು ಮೂಡಿಸಲು ಮುಂದಾಗುವಂತೆ ತಿಳಿಸಿದರು.
ಅರವಳಿಕೆ ತಜ್ಞ ಡಾ. ಶಿವಕುಮಾರ ಕುಂಬಾರ ಅವರು ಸ್ತ್ರೀ ಭ್ರೂಣಹತ್ಯೆ ಕಾನೂನು ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರ್.ಸಿಎಚ್ ಅಧಿಕಾರಿ ಡಾ. ಡಿ.ಬಿ. ಮೂಲಿಮನಿ ನಿರ್ವಹಿಸಿ, ವಂದಿಸಿದರು.