ಪಿಯು ಪರೀಕ್ಷೆ: 548 ವಿದ್ಯಾರ್ಥಿಗಳು ಹಾಜರ್
ಹಾವೇರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ಜರುಗಿದೆ. ಉರ್ದು ವಿಷಯದ ಒಟ್ಟು 562 ವಿದ್ಯಾರ್ಥಿಗಳಲ್ಲಿ 548 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 14 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮ ಪ್ರಕರಣಗಳು ಜರುಗಿಲ್ಲ, ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಆರ್. ಕೊಣ್ಣೂರ ತಿಳಿಸಿದ್ದಾರೆ.
ಸಭೆ- ಕಾರ್ಯಕ್ರಮ ನಿಷೇಧ
ಹಾವೇರಿ: ರಾಣಿಬೆನ್ನೂರು ನಗರದಲ್ಲಿ ಶಾಂತಿ-ಸುವ್ಯವಸ್ಥೆ, ಕೋಮು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ನಗರದ ಮಧ್ಯಭಾಗದಲ್ಲಿರುವ ಟಾಂಗಾಕೂಟದ ಬಯಲು ಜಾಗೆಯಲ್ಲಿ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಿ ಈ ಮುಂಚೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಏ.1ರಿಂದ ಮೇ 31ರ ವರೆಗೆ ಮುಂದುವರಿಸಿ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ ಆದೇಶ ಹೊರಡಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ
ಹಾವೇರಿ: ಏಪ್ರಿಲ್ 1ರಿಂದ 10ರ ವರೆಗೆ ಜಿಲ್ಲೆಯ 81 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತ ಹಾಗೂ ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿಗಳು ಆಯಾ ಪರೀಕ್ಷೆ ದಿನಗಳಂದು ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನಿರ್ಬಂಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಅಥವಾ ಗುಂಪುಗಳ ಪ್ರವೇಶವನ್ನು ನಿಷೇಧಿಸಿದ್ದಲ್ಲದೇ, ಈ ಪ್ರದೇಶದಲ್ಲಿ ಝರಾಕ್ಸ್ ಹಾಗೂ ಟೈಪಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಮತ್ತು ಮೊಬೈಲ್ ಬಳಕೆ ಮಾಡದಂತೆ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದೆಂದು ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಹಾವೇರಿ: ಜಿಲ್ಲೆಯಲ್ಲಿ ಮಾ. 27ರಿಂದ ಏ.6ರ ವರೆಗೆ ಹೋಳಿ ಹಬ್ಬ ನಡೆಯಲಿದ್ದು, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹೋಳಿ ನಡೆಯುವ ಸ್ಥಳಗಳಲ್ಲಿ ಮದ್ಯ ಮಾರಾಟ ನಿಷೇಧಿಸಿದೆ ಎಂದು ಡಿಸಿ ಜಿ. ಜಗದೀಶ ತಿಳಿಸಿದ್ದಾರೆ. ದೇವಗಿರಿ, ಕರ್ಜಗಿ, ಮೇದೂರಲ್ಲಿ ಮಾ. 27ರ ಬೆಳಗ್ಗೆ 6ರಿಂದ ಮಾ. 28ರ ಬೆಳಗ್ಗೆ 6ರ ವರೆಗೆ, ಗುತ್ತಲ, ಹಾವನೂರು, ಕಾಗಿನೆಲೆ, ಕುಮಾರಪಟ್ಟಣಂ, ಹಿರೇಕೆರೂರು, ಮಾಸೂರಲ್ಲಿ ಮಾ. 28ರ ಬೆಳಗ್ಗೆ 6ರಿಂದ ಮಾ. 29ರ ಬೆಳಗ್ಗೆ 6ರ ವರೆಗೆ, ಹಾವೇರಿ ಶಹರ, ರಾಣಿಬೆನ್ನೂರು ಶಹರ, ರಾಣಿಬೆನ್ನೂರು ಗ್ರಾಮೀಣ, ಹಲಗೇರಿ, ರಟ್ಟಿಹಳ್ಳಿ, ಬಂಕಾಪುರ, ಮಾ. 30ರ ಬೆಳಗ್ಗೆ 6ರಿಂದ 31ರ ಬೆಳಗ್ಗೆ 6ರ ವರೆಗೆ, ಬ್ಯಾಡಗಿ, ಮೊಟೇಬೆನ್ನೂರು, ಹಂಸಭಾವಿ, ತಡಸ, ಬೆಳಗಾಲಪೇಟೆ, ಆಡೂರು, ಸವಣೂರಲ್ಲಿ ಮಾ. 31ರ ಬೆಳಗ್ಗೆ 6ರಿಂದ ಏ.1ರ ಬೆಳಗ್ಗೆ 6ರ ವರೆಗೆ, ಹುಲಗೂರಲ್ಲಿ ಏ.2ರ ಬೆಳಗ್ಗೆ 6ರಿಂದ ಏ.3ರ ಬೆಳಗ್ಗೆ 6ರ ವರೆಗೆ, ಚಿಕ್ಕೆರೂರ, ಅಕ್ಕಿಆಲೂರಲ್ಲಿ ಏಪ್ರಿಲ್ 6ರ ಬೆಳಗ್ಗೆ 6ರಿಂದ ಏ.7ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.