ಪ್ರಜಾಪ್ರಭುತ್ವದಲ್ಲಿ ಮೌಲ್ಯಗಳ ಕುಸಿತ
ಬ್ಯಾಡಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಮನ್ನಣೆ ಸಿಗುತ್ತಿಲ್ಲ. ಸಾಮಾಜಿಕ ನ್ಯಾಯದ ಪೊಳ್ಳುವಾದಗಳು ಜನರಲ್ಲಿ ಮತೀಯ ಭಾವನೆಗಳನ್ನು ಬೆಳೆಸುತ್ತಿವೆ ಎಂದು ಕೂಡಲಮಠದ ಷ.ಬ್ರ. ಗುರುನಂಜೇಶ್ವರ ಶಿವಾಚಾರ್ಯಶ್ರೀ ವಿಷಾದಿಸಿದರು.
ತಾಲೂಕಿನ ಘಾಳಪೂಜಿಯ ಶ್ರೀಗುರು ಹುಚ್ಚೇಶ್ವರಸ್ವಾಮಿ ದೇವಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕಲುಷಿತ ರಾಜಕೀಯ ಪರಿಸ್ಥಿತಿಗಳಲ್ಲಿ ಪ್ರಜಾಪ್ರಭುತ್ವ ತನ್ನ ಎಂದಿನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಧರ್ಮ-ಅಧರ್ಮಗಳ ನಡುವೆ ಶೀತಲ ಸಮರ ನಡೆಯುತ್ತಿದ್ದು, ಅದರಲ್ಲಿ ಸಿಲುಕಿರುವ ಸಾರ್ವಜನಿಕರು ವ್ಯವಸ್ಥೆಗೆ ಹೊಂದಿಕೊಳ್ಳಲಾರದೇ ತೊಳಲಾಡುತ್ತಿದ್ದಾರೆ ಎಂದರು.
ಆಧುನಿಕ ಜೀವನದಲ್ಲಿ ತಾಂತ್ರಿಕತೆ ಹೆಚ್ಚಾದಂತೆ ಮನುಷ್ಯ ತನ್ನ ಲೌಕಿಕ ಜೀವನದಲ್ಲಿ ಒತ್ತಡವನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ. ಇದರಿಂದ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡಿರುವ ಮನುಷ್ಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ ಎಂದರು.
ಸನಾತನ ಧರ್ಮ,ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ದೂರ ತಳ್ಳಿರುವ ಮನುಷ್ಯ ಧರ್ಮದ ಮೂಲ ಸಿದ್ಧಾಂತಗಳಿಗೆ ತಿಲಾಂಜಲಿ ಹೇಳಿದ್ದಾನೆ. ಶಾಂತಿ ನೆಮ್ಮದಿ ಹಾಗೂ ಸಹಬಾಳ್ವೆ ನಡೆಸುವುದು ಸರ್ವ ಧರ್ಮಗಳ ಮೂಲವಾಗಿದ್ದರೂ ಸಹ ಕೆಲ ಅನುಯಾಯಿಗಳು ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಗಿರೀಶ್ಶಾಸ್ತ್ರಿ ಹಿರೇಮಠ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಇತ್ತೀಚಿನ ದಿನಗಳಲ್ಲಿ ಆಧುನಿಕತೆ ನೆಪದಲ್ಲಿ ಮೂಲ ಸಂಸ್ಕೃತಿಗೆ ಧಕ್ಕೆ ಬರುವಂತಹ ಕೆಲಸಗಳಲ್ಲಿ ತೊಡಗಿರುವ ಯುವಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಇದರಿಂದ ಸಾಮಾಜಿಕ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗುವ ಮೂಲಕ ಯುವಪೀಳಿಗೆ ಹಾದಿ ತಪ್ಪುತ್ತಿರುವುದು ವಿಷಾದಕರ. ಹಳ್ಳಿಗಳಲ್ಲಿ ಜೀವಂತವಾಗಿರುವ ಸಾಂಪ್ರದಾಯಿಕ ಆಚರಣೆಗಳು ಧರ್ಮರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.
ಸೋಮಯ್ಯ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು, ಬೆಳಗಿನ ಜಾವ ಶ್ರೀ ಹುಚ್ಚೇಶ್ವರ ಶಿವಾಚಾರ್ಯ ದೇವರಿಗೆ ಹಾಗೂ ಚೌಡಮ್ಮದೇವಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಭಿಷೇಕ ಜರುಗಿತು. ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ನೇತ್ರಾ ಜಾಡರ, ಸದಸ್ಯರಾದ ಸುರೇಶ ಲಂಕೇರ, ಚಾಮನಗೌಡ ಮರಿಗೌಡ್ರ, ಷಣ್ಮುಖಪ್ಪ ಈಳಿಗೇರ, ತಾಲೂಕು ಅರ್ಚಕರ ಸಂಘದ ಸಹಕಾರ್ಯದರ್ಶಿ ಗಣೇಶ ಪೂಜಾರ, ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ್ರ ಶಿಡ್ರಳ್ಳಿ,, ಮೂಕಯ್ಯ ಹಿರೇಮಠ ಇದ್ದರು. ಹುಚ್ಚಯ್ಯ ಹಮ್ಮಿಗಿಮಠ ಕಾರ್ಯಕ್ರಮ ನಿರ್ವಹಿಸಿದರು.