ಸ್ವ ಉದ್ಯೋಗ ಆರಂಭಿಸಿ: ಹನುಮಂತಪ್ಪ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 26
ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗಿದ್ದ ಶಿಕ್ಷಣ ವ್ಯಾಪಾರೀಕರಣದಿಂದ ಹಣ ಗಳಿಕೆಯ ವಸ್ತುವಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿಯೂ ತೀವ್ರ ಪೈಪೋಟಿ ನಡೆದಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ. ಹನುಮಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಪುರಸಭೆ ಸಭಾಭವನದಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯ ನಗರ ಸಮುದಾಯ ಅಭಿವೃದ್ಧಿ ಜಾಲ ಘಟಕದಡಿ ಯುವಕರಿಗಾಗಿ ಏರ್ಪಡಿಸಿದ್ದ ಮಾರ್ಗದರ್ಶನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪದವೀಧರ ಯುವಕರು ಸರ್ಕಾರಿ ಕೆಲಸಕ್ಕಾಗಿ ಕಾಯದೆ, ಶಿಕ್ಷಣದಲ್ಲಿ ಪಡೆದ ಜ್ಞಾನದ ಬಲದಿಂದ ಸ್ವಯ ಂ ಉದ್ಯೋಗ ಕೈಗೊಳ್ಳಲು ಮುಂದಾಗಬೇಕಾಗಿದೆ. ಈ ಉದ್ದೇಶಕ್ಕಾಗಿ ಸರ್ಕಾರ ಅವರಿಗಾಗಿ ವಿನೂತನ ತರಬೇತಿಗಳನ್ನು ಆಯೋಜಿಸಿದೆ. ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಮುಖ್ಯಾಧಿಕಾರಿ ಎ.ಬಿ. ಹಾಳಕಲ್ಲಾಪುರ ಮಾತನಾಡಿ, ಯುವಕರು ದುಡಿಮೆಯಲ್ಲಿ ತೊಡಗಿಕೊಂಡಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಜಾಗತೀಕರಣ ಯುಗದಲ್ಲಿ ಯುವಕರಿಗೆ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದರು. ಜಿ.ವಿ. ಕುಂದಗೋಳ ಮತ್ತು ವೈ.ಎಂ. ಹಿರಿಯಕ್ಕನವರ ಮಾತನಾಡಿದರು. ಯೋಜನಾಧಿಕಾರಿ ಎಸ್.ಡಿ. ಅಗಡಿ ಯೋಜನೆಯ ಅನುಷ್ಠಾನದ ಬಗ್ಗೆ ತಿಳಿಸಿದರು, ವಿದ್ಯಾ ಶೆಟ್ಟಿ ಸ್ವಾಗತಿಸಿದರು, ಜೆ.ಎಂ. ಕೋರಿಶೆಟ್ಟರ ವಂದಿಸಿದರು.