ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೈಗೆ ಟಿಕೆಟ್ ಹಂಚಿಕೆ ತಲೆನೋವು

Rashmi Kasaragodu
Updated On : 28 Mar 2013, 11:06 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 27
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿ ಹಿಡಿದೇ ಬಿಟ್ಟೇವು.. ಎಂಬ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ಚುನಾವಣೆಗೆ 39 ದಿವಸಗಳು ಬಾಕಿಯಿದ್ದರೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸದೇ ಕಾರ್ಯಕರ್ತರ ನಾಡಿಮಿಡಿತ ಪರೀಕ್ಷಿಸುತ್ತಿದೆ. ಇದಕ್ಕೆ ಬ್ಯಾಡಗಿ ವಿಧಾನಸಭೆ ಕ್ಷೇತ್ರವೂ ಹೊರತಾಗಿಲ್ಲ.
ಮತ್ತೆ ತಪ್ಪು: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎನ್ನುವ ಕೆಪಿಸಿಸಿ ವರಿಷ್ಠರ ಮಾತುಗಳಲ್ಲಿ ನಂಬಿಕೆ ದೂರವಾಗಿದೆ. ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯ ಹೆಸರನ್ನು ಕೊನೆ ಕ್ಷಣದಲ್ಲಿ ಅಂತಿಮಗೊಳಿಸಿದ್ದೇ ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಒಂದು ಕಾರಣ ಕೂಡ ಆಗಿತ್ತು. ಅಭ್ಯರ್ಥಿಯ ಹೆಸರು ಅಂತಿಮಗೊಳಿಸದ ಕಾಂಗ್ರೆಸ್ ಈ ಬಾರಿ ಮತ್ತೊಮ್ಮೆ ತಪ್ಪು ಹೆಜ್ಜೆ ಇಡುತ್ತಿದೆ ಎನಿಸುತ್ತಿದೆ.
ನುಂಗಲಾರದ ತುತ್ತು: 2007ರಲ್ಲಿ ಬ್ಯಾಡಗಿ ಪುರಸಭೆ ಚುನಾವಣೆಯಲ್ಲಿ 23ರಲ್ಲಿ 13 ಸ್ಥಾನ ಪಡೆದಿದ್ದ ಕಾಂಗ್ರೆಸ್ ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ 5 ಸ್ಥಾನಗಳಲ್ಲಿ ಗೆಲವು ಸಾಧಿಸಿ ಮುಖಭಂಗ ಅನುಭವಿಸಿದೆ. ಪಟ್ಟಣದಲ್ಲಿರುವ ಪ್ರಜ್ಞಾವಂತ ಮತಗಳಲ್ಲೇ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳುವಷ್ಟರಲ್ಲೇ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿದೆ.
ಬಂಡಾಯಕ್ಕೆ ಬ್ರೇಕ್: ಬೇಗನೆ ಟಿಕೆಟ್ ಘೋಷಣೆ ಮಾಡಿದರೆ ಟಿಕೆಟ್ ವಂಚಿತರಿಂದ ಬಂಡಾಯದ ಬಿಸಿಗೆ ಬ್ರೇಕ್ ಹಾಕಲು ಬಹುಶಃ ಕೆಪಿಸಿಸಿ ನಿರ್ಧರಿಸಿದಂತಿದೆ. ಹೀಗಾಗಿ ಪ್ರತಿ ಕ್ಷೇತ್ರದಲ್ಲಿಯೂ ಪ್ರಬಲ ಆಕಾಂಕ್ಷಿಗಳ 2 ಹೆಸರು ಅಂತಿಮಗೊಳಿಸಿ (ಕೆಲವೆಡೆ 3)ಎಐಸಿಸಿಗೆ ರವಾನಿಸಿದ್ದು, ಕೊನೆ ಗಳಿಗೆಯಲ್ಲಿ ಟಿಕೆಟ್ ಘೋಷಿಸಲಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದ್ದು, ಬಹುಶಃ ಇಲ್ಲಿಯೂ ಅದನ್ನೇ ಮುಂದುವರೆಸಲಿದೆ.
ರೀ ಎಂಟ್ರಿ: ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಜೆಡಿಎಸ್ ಜೊತೆ ವಿಹಾರ ಮುಗಿಸಿ ಕಾಂಗ್ರೆಸ್‌ಗೆ ರೀ ಎಂಟ್ರಿ ಕೊಟ್ಟ ಮೇಲೆ ಪಕ್ಷಕ್ಕೆ ಒಂದೆಡೆ ಬಲ ಹೆಚ್ಚಾಗಿದ್ದರೆ ಮತ್ತೊಂದೆಡೆ ಕಾಂಗ್ರೆಸ್‌ನ ಆಂತರಿಕ ವಲಯದಲ್ಲೇ ಅನುಮಾನ ಸುಳಿಯಲು ಆರಂಭಿಸಿದೆ. ಟಿಕೆಟ್‌ಗೆ ಪೈಪೋಟಿ ನಡೆಸಿರುವ ಬಸವರಾಜ ಶಿವಣ್ಣನವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಪ್ರಚಾರ ಸಾಧ್ಯವೇ?: ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬ್ಯಾಡಗಿ ಪಟ್ಟಣ ಹೊರತುಪಡಿಸಿ ಹಾವೇರಿ ತಾಲೂಕಿನ 26 ಹಾಗೂ ರಾಣಿಬೆನ್ನೂರಿನ 25 ಗ್ರಾಮ ಸೇರಿ ಒಟ್ಟು 114 ಗ್ರಾಮಗಳಿದ್ದು, ಸುಮಾರು 1.80 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಕಾಲಾವಕಾಶ ಕಡಿಮೆಯಿರುವುದರಿಂದ ಅಭ್ಯರ್ಥಿಗಳು ಇಂದಿನಿಂದಲೇ ಪ್ರಚಾರ ಆರಂಭಿಸಿದರೂ ಪ್ರತಿದಿನ ಕನಿಷ್ಠ 4 ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಮತದಾರರನ್ನು ತಲುಪಲು ಸಾಧ್ಯವೇ? ಎನ್ನುವುದು ಅಭ್ಯರ್ಥಿಗಳಲ್ಲಿರುವ ಆತಂಕ.
ಮಾನದಂಡವೇನು..?: ಕ್ರಿಮಿನಲ್ ಹಿನ್ನೆಲೆ, ಜಿಲ್ಲಾ ಘಟಕದ ಅಧ್ಯಕ್ಷರಿಗೆ, ಒಂದೇ ಕ್ಷೇತ್ರದಲ್ಲಿ 2 ಬಾರಿ ಸೋತ ಅಭ್ಯರ್ಥಿಗೆ, 70 ವರ್ಷ ಮೀರಿದವರಿಗೆ, ಅಡ್ಡ ಮತದಾನ ಮಾಡಿದವರಿಗೆ, ಕಳೆದ ಬಾರಿ ಠೇವಣಿ ಕಳೆದುಕೊಂಡವರು ಮತ್ತು ವಲಸಿಗರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸುವ ಕುರಿತು ಎಐಸಿಸಿ ನಿರ್ಧರಿಸಿದೆ.
ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಜಿಲ್ಲೆಯಲ್ಲಿ ಬಹುತೇಕ ಹಿರಿಯ ಕಾಂಗ್ರೆಸ್ಸಿಗರು ಅರ್ಜಿಯನ್ನೇ ಹಾಕುವಂತಿರಲಿಲ್ಲ. ಆದರೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಜಾತಿವಾರು ಮತಗಳ ಲೆಕ್ಕಾಚಾರದಲ್ಲಿ ಟಿಕೆಟ್ ನೀಡುತ್ತಾ ಬಂದಿರುವುದು ಕಾಂಗ್ರೆಸ್ ಸಂಸ್ಕೃತಿಯಾದ್ದರಿಂದ ಈ ಬಾರಿಯೂ ಅದನ್ನೇ ಮುಂದವರೆಸಿದರೂ ಆಶ್ಚರ್ಯಪಡಬೇಕಾಗಿಲ್ಲ.
ಇತ್ತೀಚೆಗಷ್ಟೇ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಹಿರೇಕೆರೂರು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಕ್ರಮವಾಗಿ ಅಜ್ಜಂಪೀರ ಖಾದ್ರಿ ಹಾಗೂ ಶಾಸಕ ಬಿ.ಸಿ. ಪಾಟೀಲ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಘೋಷಣೆಯಾಗಿದ್ದು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹಜವಾಗಿ ಕುತೂಹಲ ಹಾಗೂ ಆತಂಕ ಹೆಚ್ಚುವಂತೆ ಮಾಡಿದೆ.

-ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement