ಪಕ್ಷದ್ರೋಹಿಗಳಿಗೆಮತದಾರರಿಂದ ತಕ್ಕಪಾಠ
ರಾಣಿಬೆನ್ನೂರು: ಅಭ್ಯರ್ಥಿಗಳು ಇಲ್ಲದಿರುವುದರಿಂದ ಅನಿವಾರ್ಯವಾಗಿ ಜಿ.ಶಿವಣ್ಣ ಅವರಿಗೆ ಕೆಜೆಪಿ ಟಿಕೆಟ್ ನೀಡಿದೆ. ಇದಕ್ಕೆ ಮೇ 5ರಂದು ಮತದಾರ ನಿರ್ಧಾರ ತಿಳಿಸಲಿದ್ದು, ಮೇ 11ರಂದು ಜಗಜ್ಜಾಹೀರಾಗಲಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ತಿಳಿಸಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಬೆಂಬಲಿಸುವಂತೆ ಮಾ. 29ರಂದು ಬೆಳಗ್ಗೆ 10ಕ್ಕೆ ತಾಲೂಕಿನ ಬೇಲೂರು ಗ್ರಾಮದ ಕರಿಯಮ್ಮ ದೇವಿ ದೇವಸ್ಧಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧತೆಗಳನ್ನು ಮಾಡಲಾಗಿದೆ. ಪಕ್ಷದ್ರೋಹಿಗಳಿಗೆ ತಕ್ಕಪಾಠ ಕಲಿಸಲು ಮತದಾರ ಕಾತರನಾಗಿದ್ದಾನೆ ಎಂದು ಡಾ. ಕೇಲಗಾರ ತಿಳಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಬಿಜೆಪಿದಿಂದ ಎಲ್ಲ ಲಾಭ ಪಡೆದ ಮೋಸಗಾರರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ವಿ.ಸಿ ಪಾಟೀಲ ಅವರನ್ನು ಬರಮಾಡಿ ಕೊಂಡರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ನಗರ ಬಿಜೆಪಿ ಅಧ್ಯಕ್ಷ ಸುರಳಿಕೇರಿಮಠ, ಗೀತಾ ಜಂಬಗಿ, ವೀರಣ್ಣ ಅಂಗಡಿ, ಕೆ.ಎನ್. ಕೋರಧಾನ್ಯಮಠ, ವಿಶ್ವನಾಥ ಹೊಳೆಬಾಗಿಲ ಇದ್ದರು.
ಬೇಸಿಗೆ ಧಾರ್ಮಿಕತರಬೇತಿ ಶಿಬಿರ
ರಾಣಿಬೆನ್ನೂರು: ಇಲ್ಲಿನ ಮೃತ್ಯುಂಜಯ ನಗರದ ವಾಗೀಶ ಪಂಡಿತಾರಾಧ್ಯ ಮಂಟಪದಲ್ಲಿ ಏ.15ರಿಂದ 25ರ ವರೆಗೆ ಬೇಸಿಗೆ ಧಾರ್ಮಿಕ ತರಬೇತಿ ಶಿಬಿರವನ್ನು ಏರ್ಪಡಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 14ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಧಾರ್ಮಿಕ ವಿಷಯವಾಗಿ ತರಬೇತಿಯನ್ನು ನೀಡಲಾಗುವುದು. ಆಸಕ್ತರು ತಮ್ಮ ಹೆಸರುಗಳನ್ನು ತರಬೇತಿ ಸಂಘಟನೆಯ ಸಂಚಾಲಕ ಎಂ.ಕೆ ಹಾಲಸಿದ್ದಯ್ಯ ಮೊಬೈಲ್ 9880093315 ಇಲ್ಲಿ ನೋಂದಾಯಿಸಬಹುದು.
ಆಯುಷ್ ಆರೋಗ್ಯ ಉಚಿತ ತಪಾಸಣೆ ಇಂದು
ಹಾವೇರಿ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಆಯುಷ್ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ ಆಯುಷ್ ವಿಭಾಗದಿಂದ ಉಚಿತ ಆಯುಷ್ ಆರೋಗ್ಯ ತಪಾಸಣೆ ಮಾ. 28ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಜರುಗಲಿದೆ. ಪ್ರಭಾರ ಜಿಲ್ಲಾಧಿಕಾರಿ ಜಿ.ಜಗದೀಶ ಉದ್ಘಾಟಿಸುವರು ಹಾಗೂ ಜಿಪಂ ಸಿಇಓ ಉಮೇಶ ಕುಸುಗಲ್ಲ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಎನ್.ಮರೆಕ್ಕನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಜಿ. ರಾಘವೇಂದ್ರಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ, ಜಿಲ್ಲಾ ಆಯುಷ್ ನೋಡಲ್ ಅಧಿಕಾರಿ ಡಾ. ಮನೋಜಕುಮಾರ ಸವಣೂರ, ಜಿಲ್ಲಾ ಯೋಗ ಸಂಯೋಜಕ ಡಾ. ಜಿ.ಸಿ.ನಿಡಗುಂದಿ ಪಾಲ್ಗೊಳ್ಳುವರು ಎಂದು ಜಿಲ್ಲಾಸ್ಪತ್ರೆ ಆಯುಷ್ ವೈದ್ಯ ಡಾ. ಲುಬ್ನಾ ಕೌಸರ ತಿಳಿಸಿದ್ದಾರೆ.
150 ಲೀ. ಕಳ್ಳಭಟ್ಟಿ ವಶ
ಹಾನಗಲ್ಲ: ತಾಲೂಕಿನ ಹುಲಗಿನಕೊಪ್ಪ ಕ್ರಾಸ್ ಬಳಿ ಬುಧವಾರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 150 ಲೀಟರ್ ಅಕ್ರಮ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಉಪಆಯುಕ್ತ ಟಿ. ನಾಗರಾಜಪ್ಪ, ವಿ. ಚಂದ್ರಪ್ಪ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಏಳು ರಬ್ಬರ್ ಟ್ಯೂಬ್ಗಳಲ್ಲಿ ಸಂಗ್ರಹಿಸಿಟ್ಟಿದ್ದ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು ರು. 10 ಸಾವಿರ ಮೌಲ್ಯ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಪತ್ತೆಯಾಗಿಲ್ಲ. ಹಾನಗಲ್ಲ ವಲಯ ಅಬಕಾರಿ ಉಪನಿರೀಕ್ಷಕ ಬಿ.ಎಂ. ಮೋಹನ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಹೊನ್ನಪ್ಪ ಓಲೇಕಾರ, ಎನ್.ಆರ್. ದಾಮೋದರ, ಕೆ.ಎನ್. ಕಮ್ಮಾರ, ಎಂ.ಎಫ್. ಕಟಗೆನ್ನವರ, ಎನ್.ಎಂ. ನವಲೆ, ರಬ್ಬಾನಿ ಬೆನಿವಾಲ ಪಾಲ್ಗೊಂಡಿದ್ದರು.
ಡಿಕ್ಕಿ: ಬೈಕ್ ಸವಾರ ಸಾವು
ಹಾವೇರಿ: ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡ ಘಟನೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದಲ್ಲಿ ಜರುಗಿದೆ. ಮೃತನನ್ನು ಮಹಬೂಬಸಾಬ ಅಲಿಯಾಸ ಶೇರು ಸಿಜಾವುದ್ದೀನ ಪಟೇಲ (28) ಎಂದು ಗುರುತಿಸಲಾಗಿದೆ. ಗಾಯಾಳು ಹುಲ್ಲಪ್ಪ ವೆಂಕಟಪ್ಪ ತಳವಾರನನ್ನು ಆಸ್ಪತ್ರೆಗೆ ದಾಖಲಿಸಾಗಿದೆ. ಟಾಟಾ ಏಸ್ ಚಾಲಕ ನೀಲಪ್ಪ ವೆಂಕಟಪ್ಪ ತಳವಾರ ವಿರುದ್ಧ ಉಜ್ಜಪ್ಪಗೌಡ ಭರಮಗೌಡ ಹುಡೇದ ಸವಣೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆದಿದೆ.
ಡಿಕ್ಕಿ: ಪಾದಚಾರಿ ಸಾವು
ಹಾವೇರಿ: ಪಾದಚಾರಿಗೆ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣವಾದ ವಾಹನ ನಿಲ್ಲಿಸದೆ ಪರಾರಿಯಾದ ಘಟನೆ ಸವಣೂರು ತಾಲೂಕು ಹೊಸನೀರಲಗಿ ಗ್ರಾಮದಲ್ಲಿ ಜರುಗಿದೆ. ಮೃತಪಟ್ಟಿರುವ ವ್ಯಕ್ತಿ 30-35 ವರ್ಷದವನಾಗಿದ್ದು, ಇತರೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತಂತೆ ನಿಂಗನಗೌಡ ಸಂಗನಗೌಡ ಪಾಟೀಲ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜಾಂಡಿಸ್: ಮಹಿಳೆ ಆತ್ಮಹತ್ಯೆ
ಹಾವೇರಿ: ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಜರುಗಿದೆ. ಮೃತಳನ್ನು ಶಾಂತಾ ಮುರಿಗೆಪ್ಪ ಬೆನ್ನೂರ (19) ಎಂದು ಗುರುತಿಸಲಾಗಿದೆ. ಈಕೆ 3-4 ವರ್ಷದಿಂದ ಜಾಂಡಿಸ್ನಿಂದ ಬಳಲುತ್ತಿದ್ದಳು. ಶಸ್ತ್ರಚಿಕಿತ್ಸೆ ನಡೆಸಿದಾಗ್ಯೂ ಗುಣಕಾಣಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿ ತಂದೆ ಮುರಿಗೆಪ್ಪ ವೀರಭದ್ರಪ್ಪ ಬೆನ್ನೂರ ಬ್ಯಾಡಗಿ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.