ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 27
ಏಪ್ರಿಲ್ 1ರಿಂದ 10ರ ವರೆಗೆ ಜಿಲ್ಲೆಯಲ್ಲಿ 81 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಜರುಗಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದೆ. ಪರೀಕ್ಷೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಪರೀಕ್ಷಾ ವ್ಯವಸ್ಥೆಗೆ ನೇಮಕಗೊಂಡ ಕೇಂದ್ರಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗಡಿ ಬಂದ್ಗೆ ಆದೇಶ: ಪರೀಕ್ಷೆ ಶಾಂತ ಹಾಗೂ ಸುವ್ಯವಸ್ಥಿತ ವಾತಾವರಣದಲ್ಲಿ ನಡೆಯಲು ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಪ್ರದೇಶವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ, ಆ ಪ್ರದೇಶದಲ್ಲಿನ ಝೇರಾಕ್ಸ್ ಮತ್ತು ಟೈಪಿಂಗ್ ಸೆಂಟರ್ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 25 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ವಸ್ತುಗಳ ನಿಷೇಧ: ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು ಪುಸ್ತಕ, ಕ್ಯಾಲ್ಕುಲೇಟರ್ ಹಾಗೂ ಮೊಬೈಲ್ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದು, ನಕಲು ತಡೆಗೆ ನಿಗಾ ಇರಿಸಿ ಕಾರ್ಯನಿರ್ವಹಿಸುವಂತೆ ಕೊಠಡಿ ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸೂಚಿಸಿದರು. ಪರೀಕ್ಷಾ ದಿನಗಳಂದು ಆಯಾ ವಿಷಯಗಳ ಶಿಕ್ಷಕರುಗಳನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬಾರದು ಮತ್ತು ಸಂಬಂಧಿಸಿದ ವಿಷಯದ ಶಿಕ್ಷಕರು ಪರೀಕ್ಷಾ ಕೇಂದ್ರದ ಹತ್ತಿರ ಬರದಂತೆ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
20,360 ಮಕ್ಕಳು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ. ಕೊಡ್ಲಿ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯ ಒಟ್ಟು 356 ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳ 20,360 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 10,294 ಗಂಡು ಹಾಗೂ 10,066 ಹೆಣ್ಣು ಮಕ್ಕಳು ಸೇರಿದ್ದಾರೆ. ಈ ವಿದ್ಯಾರ್ಥಿಗಳ ಪರೀಕ್ಷೆಗಾಗಿ ಜಿಲ್ಲಾದ್ಯಂತ 81 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಖಾಸಗಿ ಅಭ್ಯರ್ಥಿಗಳಿಗಾಗಿಯೇ ಪ್ರತ್ಯೇಕ ಪರೀಕ್ಷಾ ಕೇಂದ್ರವನ್ನು ಹಾವೇರಿಯ ಸೇಂಟ್ ಆನ್ಸ್ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದೆ ಎಂದರು.
ವಿಚಕ್ಷಣಾ ತಂಡ: ಪರೀಕ್ಷೆಯಲ್ಲಿ ನಕಲು ತಡೆ ಹಾಗೂ ಪರೀಕ್ಷೆಗಳು ಶಾಂತ ಮತ್ತು ಸುವ್ಯವಸ್ಥಿತವಾಗಿ ನಡೆಯಲು ತಾಲೂಕಿಗೊಂದರಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ 7 ಜಾಗೃತ ದಳಗಳನ್ನು ರಚಿಸಲಾಗಿದೆ. ಈ ದಳಗಳು ತಮಗೆ ವಹಿಸಿದ ತಾಲೂಕು ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಲಿವೆ. ಅಲ್ಲದೆ, ಜಿಲ್ಲಾಧಿಕಾರಿ, ಜಿಪಂ ಸಿಇಓ, ಸರ್ವಶಿಕ್ಷಾ ಅಭಿಯಾನ ಹಾಗೂ ಅಕ್ಷರ ದಾಸೋಹ ಯೋಜನೆಯ ಸಮನ್ವಯಾಧಿಕಾರಿ, ಡಯಟ್ ಪ್ರಾಚಾರ್ಯರು, ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಒಟ್ಟು 13 ತಂಡ ವಿಚಕ್ಷಣಾ ಕಾರ್ಯನಿರ್ವಹಿಸಲಿವೆ ಎಂದರು.
ಸಕಲ ಸಿದ್ಧತೆ: ಪ್ರಸಕ್ತ 20,360 ಪರೀಕ್ಷಾರ್ಥಿಗಳ ಪೈಕಿ 19,667 ವಿದ್ಯಾರ್ಥಿಗಳನ್ನು ಪ್ರಥಮ ಬಾರಿ ಹಾಗೂ 693 ವಿದ್ಯಾರ್ಥಿಗಳು ಪುನರಾವರ್ತಿತರಾಗಿ ಪರೀಕ್ಷೆ ಬರೆಯುತ್ತಿದ್ದು, ಈ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ಪರೀಕ್ಷಾ ಸಿದ್ಧತೆ ಬಗ್ಗೆ ವಿವರಿಸಿದರು.
ಸೂಕ್ಷ್ಮ ಪರೀಕ್ಷಾ ಕೇಂದ್ರಗಳು: ಜಿಲ್ಲೆಯಲ್ಲಿ 81 ಪರೀಕ್ಷಾ ಕೇಂದ್ರಗಳ ಪೈಕಿ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು, ಹಾನಗಲ್ಲ ತಾಲೂಕಿನ ಹೆರೂರು-ಕಲಕೇರಿ, ಹಿರೇಕೆರೂರು ತಾಲೂಕಿನ ಡಿಆರ್ಟಿ ಮತ್ತು ಸಿಇಎಸ್ ಬಾಲಕಿಯರ ಪ್ರೌಢಶಾಲೆ, ರಾಣಿಬೆನ್ನೂರು ತಾಲೂಕಿನ ನಗರಸಭಾ ಬಾಲಕರ ಪ್ರೌಢಶಾಲೆ, ಗುಡಗೂರು ಪ್ರೌಢಶಾಲೆ ಮತ್ತು ತಿಮ್ಮನಕಟ್ಟಿ ಪಪೂ ಕಾಲೇಜು, ಸವಣೂರು ತಾಲೂಕಿನ ಹೂವಿನ ಶಿಗ್ಲಿ ಮತ್ತು ಸವಣೂರು ಮಜೀದ್ ಪಪೂ ಕಾಲೇಜು ಹಾಗೂ ಹಾವೇರಿಯ ಸೇಂಟ್ ಆನ್ಸ್ ಪ್ರೌಢಶಾಲೆಯಲ್ಲಿ ಸ್ಥಾಪಿತವಾದ ಖಾಸಗಿ ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಘೋಷಿಸಿ, ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ವೇಳಾಪಟ್ಟಿ: ಏ. 1ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಪತ್ರಿಕೆಗಳು, 3ರಂದು ವಿಜ್ಞಾನ, 5ರಂದು ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ, 8ರಂದು ಗಣಿತ, 9ರಂದು ತೃತೀಯ ಭಾಷೆ ಹಿಂದಿ ಹಾಗೂ ಕನ್ನಡ, 10 ಸಮಾಜ ವಿಜ್ಞಾನ ಈ ಎಲ್ಲ ಪರೀಕ್ಷೆಗಳು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.45ರ ವರೆಗೆ ಜರುಗಲಿವೆ.
ಸಭೆಯಲ್ಲಿ ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ಜಿಪಂ ಸಹಾಯಕ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಪೊಲೀಸ್ ವೃತ್ತ ನಿರೀಕ್ಷಕ ಪಂಪಾಪತಿ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಬಿಇಓ, ವಿಷಯ ನಿರ್ವಾಹಕರು ಇದ್ದರು.