ಸಂಭ್ರಮದ ಗ್ರಾಮದೇವಿ ಜಾತ್ರೋತ್ಸವ
ಹಾನಗಲ್ಲ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ನಡೆಯುವ ಹಾನಗಲ್ಲಿನ ಗ್ರಾಮದೇವಿ(ದ್ಯಾಮವ್ವ) ಜಾತ್ರೆಯ ಮೊದಲ ದಿನ ರಥೋತ್ಸವದಲ್ಲಿ ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ವಿವಿಧ ರೂಪಕ, ಮಂಗಲವಾದ್ಯಗಳು ಇಡೀ ಮಂಗಳವಾರ ರಾತ್ರಿ ವಿಜಂೃಭಣೆಯಿಂದ ಜರುಗಿತು. ಇಲ್ಲಿನ ಗ್ರಾಮದೇವಿ ದೇವಸ್ಥಾನದಿಂದ ಆನೆಯ ಸಾರಥ್ಯದಲ್ಲಿ ಹೊರಟ ಭವ್ಯ ರಥೋತ್ಸವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬುಧವಾರ ಬೆಳಗ್ಗೆ ಹಳೆಬಸ್ ನಿಲ್ದಾಣ ಬಳಿಯ ಪಾದಗಟ್ಟೆಯಲ್ಲಿ ಸುಂದರವಾಗಿ ನಿರ್ಮಿಸಿದ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳ ಖ್ಯಾತ ಕಲಾ ತಂಡಗಳಾದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ತಾಶಾರಾಮ ಡೋಲು, ಹತ್ತಿಮತ್ತೂರಿನ ಝಾಂಜ್ ಮೇಳ, ಲಿಂಗದಹಳ್ಳಿಯ ಮಹಿಳಾ ವೀರಗಾಸೆ, ಚಿತ್ರದುರ್ಗ ಜಿಲ್ಲೆಯ ಸೀಳಗಿಯ ಕಹಳೆವಾದ್ಯ, ಉಡುಪಿಯ ಚೇತನಾ ಛಂಡೆ ವಾದ್ಯ, ಇನಾಮ ಯಲ್ಲಾಪುರದ ಡೊಳ್ಳು ಕುಣಿತ, ಹಿರೇಕೆರೂರು ತಾಲೂಕು ಚಿಕ್ಕ ಯಡಚಿಯ ಡೋಲು ವಾದ್ಯ, ಪೂಜಾ ಕುಣಿತ, ಕಥಕ್ಕಳಿ, ಕುದುರೆ ಕುಣಿತ, ಯಕ್ಷಗಾನ ನೃತ್ಯ, ಮಲ್ಲಿಗಾರದ ಲಂಬಾಣಿ ಭಜನಾ ಸಂಘ, ಗೊಂಬೆ ಕುಣಿತ ಹಾಗೂ ಅಯ್ಯಪ್ಪಸ್ವಾಮಿ ರಥ, ಅಡ್ಡಪಲ್ಲಕ್ಕಿ, ತಪಸ್ಸಿನಲ್ಲಿರುವ ಈಶ್ವರನ ಭಂಗಿ ರಥೋತ್ಸವಕ್ಕೆ ಮೆರಗು ತಂದವು.
ರಥೋತ್ಸವದಲ್ಲಿ ಗ್ರಾಮದೇವಿ ಜಾತ್ರಾ ಸಮಿತಿ ಪದಾಧಿಕಾರಿಗಳಾದ ಸಿ.ಎಂ. ಉದಾಸಿ, ಎಂ.ಬಿ. ಕಲಾಲ, ಸುರೇಶ ರಾಯಕರ, ಅಶೋಕ ಏಸಕ್ಕನವರ, ದುಶ್ಯಂತ ನಾಗರವಳ್ಳಿ, ಕಲ್ಯಾಣಕುಮಾರ ಶೆಟ್ಟರ್, ದೇವೇಂದ್ರಪ್ಪ ಮೂಡ್ಲಿಯವರ, ಎಂ.ಎಚ್. ಕಲಾಲ, ರಮೇಶ ಚಿನ್ನಮುಳಗುಂದ, ದವಲಾಜೆಪ್ಪ ಸಾತಪತಿ, ನಾಗೇಂದ್ರ ತುಮರಿಕೊಪ್ಪ, ರಾಮಣ್ಣ ಮಾಸನಕಟ್ಟಿ, ಯಲ್ಲಪ್ಪ ಕಿತ್ತೂರು, ಎಚ್.ಎಸ್. ನಾಗಜ್ಜನವರ ಇತರರು ಪಾಲ್ಗೊಂಡಿದ್ದರು.