ಸಮಗ್ರ ಅಧ್ಯಯನದಿಂದ ನೂತನ ಸಿದ್ಧಾಂತ ರಚನೆ
ಹಾವೇರಿ: ಜನಾಂಗದ ಜೀವನಕ್ರಮ ವೈಭವೀಕರಣಗೊಳಿಸುವುದರಿಂದ ಅಪಾಯ ಹೆಚ್ಚು. ಜನಸಮುದಾಯದ ಸಮಸ್ತ ಜ್ಞಾನ ಕಂಡುಕೊಳ್ಳುವ ಹಾಗೂ ಗ್ರಹಿಸುವ ಮೂಲಕ ಪ್ರಾಮಾಣಿಕ ಅಧ್ಯಯನದಲ್ಲಿ ತೊಡಗಬೇಕು. ಆಗ ಮಾತ್ರ ಹೊಸ ಸಿದ್ಧಾಂತಗಳನ್ನು ರೂಪಿಸಲು ಸಾಧ್ಯ ಎಂದು ಜಾನಪದ ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಹೇಳಿದರು.
ಕರ್ನಾಟಕ ಜಾನಪದ ವಿವಿಯಲ್ಲಿ 6 ದಿನಗಳ ಕಾಲ ನಡೆದ ಪಿಎಚ್ಡಿ ಸಂಶೋಧನಾ ಕೋರ್ಸ್ ವರ್ಕ್ ಕಾರ್ಯಕ್ರಮ ಉದ್ಘಾಟಿಸಿ ಜನಪದ ಸಿದ್ಧಾಂತಗಳು ವಿಷಯ ಕುರಿತು ಉಪನ್ಯಾಸ ನೀಡಿದರು.
ಸಿದ್ಧಾಂತಗಳಿಂದ ಹೊಸ ರೂಪ: ಆರಂಭದಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡುವ ಪ್ರಯತ್ನಗಳು ನಡೆಯದಿದ್ದುದು ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಯಿತು. ನಂತರ ಕಾಲ ಘಟ್ಟದಲ್ಲಿ ಹುಟ್ಟಿಕೊಂಡ ಹಲವಾರು ಜನಪದ ಸಿದ್ಧಾಂತಗಳಿಂದಾಗಿ ಜಾನಪದ ಕ್ಷೇತ್ರದ ಅಧ್ಯಯನ ಹೊಸ ದಿಕ್ಕು ಮತ್ತು ಧೋರಣೆಗಳನ್ನು ಪಡೆದುಕೊಳ್ಳಲು ಸಹಾಯಕವಾಯಿತು.
ಸಂಸ್ಕೃತಿಗೆ ಸಿದ್ಧಾಂತ ಪೂರಕ: ಮುಂದೆ ವಸ್ತುನಿಷ್ಠ ಅಧ್ಯಯನ ಕ್ರಮಗಳು ರೂಪಗೊಂಡು ಜಾನಪದ ಕ್ಷೇತ್ರವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಜನಸಮುದಾಯದ ಮೂಲ ಜ್ಞಾನ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಲು ಮತ್ತು ಇಂದಿನ ಸಮಸ್ಯೆಗಳನ್ನು ಆನ್ವಯಿಕ ನೆಲೆಯಿಂದ ನೋಡಲು ಜನಪದ ಸಿದ್ಧಾಂತಗಳು ಉಪಯುಕ್ತವಾಗಿವೆ.
ಗೌರವ ತನ್ನಿ: ಜನಪದ ಸಿದ್ಧಾಂತಗಳನ್ನು ತಿಳಿದು ಅವುಗಳ ಬೆಳಕಿನಲ್ಲಿ ಹೊಸ ವಿಧಾನ ಹುಟ್ಟುಹಾಕಿಕೊಳ್ಳುವ ಮೂಲಕ ವಿಶೇಷ ಜ್ಞಾನ ಶೋಧನೆಗೆ ಮುಂದಾಗಬೇಕು. ಆ ಮೂಲಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರವಂತಾಗಬೇಕು ಎಂದು ಸಂಶೋಧನಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಯಾರಿ ಮುಖ್ಯ: ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಮಾತನಾಡಿ, ಸಂಶೋಧನೆ ಜವಾಬ್ದಾರಿಯುತ ಮತ್ತು ಅಷ್ಟೇ ಮಹತ್ವದ ಕಾರ್ಯವಾಗಿದೆ. ಯುಜಿಸಿ ನಿಯಮಗಳನ್ವಯ ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ಸಂಶೋಧನಾ ಪೂರ್ವ ತರಬೇತಿ ನೀಡುವ ಉದ್ದೇಶದಿಂದ ಈ ಕೋರ್ಸ್ ವರ್ಕ್ನ್ನು ಆಯೋಜಿಸಲಾಗಿದೆ ಎಂದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಪೂಜಾರಿ ಉಪಸ್ಥಿತರಿದ್ದರು. ಮೈಸೂರಿನ ಪ್ರೊ. ಕೃಷ್ಣೇಗೌಡ ಕಂಪ್ಯೂಟರ್ ಅಪ್ಲಿಕೇಷನ್ ವಿಷಯ ಕುರಿತು ಉಪನ್ಯಾಸ ನೀಡಿದರು. ಮೋಹನಕುಮಾರ ಪ್ರಾರ್ಥಿಸಿದರು. ಹಿರಿಯ ಸಂಶೋಧನಾಧಿಕಾರಿ ಡಾ ಕೆ. ಪ್ರೇಮಕುಮಾರ ವಂದಿಸಿದರು. ಸಂಗಮೇಶ ಗಣಿ ನಿರ್ವಹಿಸಿದರು.
ಪ್ರಾಧ್ಯಾಪಕರಾದ ಡಾ ಎಂ.ಎನ್. ವೆಂಕಟೇಶ, ಡಾ ಕೆ. ಕಮಲಾಕ್ಷ, ವಿದ್ಯಾರ್ಥಿಗಳು ಹಾಜರಿದ್ದರು.