ನೌಕರಿ ಬಳಿಕ ತಂದೆ-ತಾಯಿ ನಿರ್ಲಕ್ಷ್ಯ ಸಲ್ಲ
ರಾಣಿಬೆನ್ನೂರು: ಸುಶಿಕ್ಷಿತರು ನೌಕರರಾದ ಮೇಲೆ ಹಳ್ಳಿಯ ತಂದೆ-ತಾಯಿಗಳನ್ನು ಮೂಲೆಗೆ ತಳ್ಳಿ, ನೌಕರಿ ನೆಪದಲ್ಲಿ ಗ್ರಾಮಗಳಿಂದ ದೂರಾಗುತ್ತಿದ್ದಾರೆ. ತಂದೆ-ತಾಯಿಯರನ್ನು ಮರೆತು ನೌಕರರಾಗುವುದಕ್ಕಿಂತ ಕೃಷಿಕರಾಗಿ ಜೀವನ ಸಾಗಿಸುವುದೇ ಲೇಸು ಎಂದು ತಿಪ್ಪಾಯಿಕೊಪ್ಪದ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ತಾಲೂಕಿನ ಹೆಡಿಯಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಿಮಿತ್ತ ಏರ್ಪಡಿಸಿದ್ದ ಪಾಲಕರ ಪಾದಪೂಜೆ ಹಾಗೂ ಧಾರ್ಮಿಕ ಆಚರಣೆಗಳು ಎಂಬ ವಿಷಯ ಕುರಿತು ಮಾತನಾಡಿದರು.
ಮಕ್ಕಳಿಗೆ ಜನ್ಮ ನೀಡಿದ ತಂದೆ-ತಾಯಿಗಳು ತಾವು ಸೇರಿರುವ ಧರ್ಮಕ್ಕನುಗುಣವಾಗಿ ಪಾಲಿಸಬೇಕಿರುವ ಧಾರ್ಮಿಕ ಆಚರಣೆಗಳನ್ನು ಪಾಲಿಸುವಂತೆ ಮಕ್ಕಳಿಗೆ ತಿಳಿಸಬೇಕು. ನೌಕರಿ ನೆಪದಲ್ಲಿ ಊರು, ತಂದೆ-ತಾಯಿಗಳನ್ನು ಮರೆಯುವುದು ರಾಕ್ಷಸಿ ಭಾವನೆ ಎಂದು ಅಭಿಪ್ರಾಯಪಟ್ಟರು.
ಹೆಡಿಯಾಲ ಗ್ರಾಮದ ನಿರಂಜನಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಆರ್.ಬಿ. ತೋಟಗೇರ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 2012-13ನೇ ಸಾಲಿನ 7 ವರ್ಗದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್,ಡಿಎಂಸಿ ಅಧ್ಯಕ್ಷ ಬಸವಣ್ಣೆಪ್ಪ ಕುರುಬರ ಅಧ್ಯಕ್ಷತೆ ವಹಿಸಿದ್ದರು. ವೀರನಗೌಡ ಪೊಲೀಸ್,ಗೌಡ್ರ ಇತರರಿದ್ದರು.