ಬಿಎಸ್,ವೈ ಜನಪರ ಕಾರ್ಯ ಕೆಜೆಪಿಗೆ ಶ್ರೀರಕ್ಷೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.29
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರಬಹುದು. ಆದರೆ, ಅವರ ಜನಪರ ಯೋಜನೆಗಳೇ ಕೆಜೆಪಿಗೆ ಶ್ರೀರಕ್ಷೆ. ಇದುವೇ ಕೆಜೆಪಿ ಗೆಲವಿಗೆ ದಾರಿಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಕೆಜೆಪಿ ಮುಖಂಡ ಸಿ.ಎಂ. ಉದಾಸಿ ಹೇಳಿದರು.
ಇಲ್ಲಿನ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ನಗರಸಭೆಗೆ ಆಯ್ಕೆಯಾದ ಕೆಜೆಪಿ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಪರಿವರ್ತನೆ ಕಾಲ: ಜಿಲ್ಲಾದ್ಯಂತ ಚುನಾವಣಾ ಪ್ರಚಾರ ಸಂದರ್ಭ ಜನರಿಂದ ದೊರೆಯುತ್ತಿರುವ ಪ್ರೀತಿ, ವಿಶ್ವಾಸ ಹಾಗೂ ಯಡಿಯೂರಪ್ಪ ಅವರ ಮೇಲಿನ ಅಭಿಮಾನ ಗಮನಿಸಿದಲ್ಲಿ ಜಿಲ್ಲೆಯ ಎಲ್ಲ 6 ವಿಧಾನಸಭೆಗಳಲ್ಲಿ ಕೆಜೆಪಿ ಅಭ್ಯರ್ಥಿಗಳ ಗೆಲವು ಖಚಿತ. ಕೇವಲ 3 ತಿಂಗಳ ಹಿಂದೆ ಹುಟ್ಟಿದ ಕೆಜೆಪಿ ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಅಲ್ಲದೇ ರಾಜ್ಯದಲ್ಲಿ ಪರಿವರ್ತನೆ ಕಾಲ ಬಂದಿದೆ ಎಂಬುದಕ್ಕೆ ಸಾಕ್ಷಿ.
ರಾಜ್ಯ ಹಿನ್ನಡೆ: ಇಂದು ಪ್ರಾದೇಶಿಕ ಪಕ್ಷಗಳಿಗೆ ದೇಶದಲ್ಲಿ ಹೆಚ್ಚು ಮನ್ನಣೆ ಸಿಗುತ್ತಿರುವುದರಿಂದ ರಾಜ್ಯದಲ್ಲೂ ಇದರ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಅಭಿವೃದ್ಧಿಯಲ್ಲಿ 7ನೇ ಸ್ಥಾನದಲ್ಲಿದ್ದ ಕರ್ನಾಟಕ 2ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದರು. ಅವರೇ ಉಳಿದ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ರಾಜ್ಯ ದೇಶದ ನಂ. 1 ಸ್ಥಾನದಲ್ಲಿರುತ್ತಿತ್ತು. ಆದರೆ, ಕೆಲವರು ಅದಕ್ಕೆ ಅಡ್ಡಗಾಲು ಹಾಕಿದರು ಎಂದು ದೂರಿದರು.
ಬಿಎಸ್,ವೈ ನೇತೃತ್ವದಲ್ಲಿ ಅಧಿಕಾರಕ್ಕೆ: ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಯಡಿಯೂರಪ್ಪ ನೇತೃತ್ವದ ಕೆಜೆಪಿ ಕೇವಲ 3 ತಿಂಗಳಲ್ಲಿ ರಾಜ್ಯಾದ್ಯಂತ ಸದೃಢವಾಗಿ ಬೆಳೆದಿದೆ. ಬರುವ ಚುನಾವಣೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರುವ ಮೂಲಕ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ. ಸಚಿವ ಸಂಪುಟದಲ್ಲಿ ಉದಾಸಿ ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಇದೇ ಸಂದರ್ಭ ನಗರಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಬಾಬುಸಾಬ ಮೋಮಿನಗಾರ ತಮ್ಮ ಬೆಂಬಲಿಗರೊಂದಿಗೆ ಮಾಜಿ ಸಚಿವ ಸಿ.ಎಂ. ಉದಾಸಿ ಸಮ್ಮುಖದಲ್ಲಿ ಕೆಜೆಪಿಗೆ ಸೇರಿದರು. ಜೆಡಿಎಸ್, ಬಿಎಸ್,ಆರ್ ಕಾಂಗ್ರೆಸ್,ನಿಂದ ಬಂದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಶಾಲು ಹೊದೆಸಿ ಸ್ವಾಗತಿಸಲಾಯಿತು. ನಂತರ ನಗರಸಭೆಗೆ ನೂತನವಾಗಿ ಆಯ್ಕೆಯಾದ ಕೆಜೆಪಿಯ ಎಂಟು ಸದಸ್ಯರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.
ಕೆಜೆಪಿ ಜಿಲ್ಲಾಧ್ಯಕ್ಷ ಮೈಲಪ್ಪ ಗುಡಗೂರು, ವಿಪ ಸದಸ್ಯ ಶಿವರಾಜ ಸಜ್ಜನರ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜ ಕಂಬಳಿ, ಹಾವೇರಿ ಎಪಿಎಂಸಿ ಅಧ್ಯಕ್ಷ ಶೇಖಣ್ಣ ಹೊನ್ನತ್ತಿ, ನಿಂಗಣ್ಣ ಮೈಲಾರ, ಜಿಲ್ಲಾ ವಕ್ತಾರ ಸುರೇಶ ಹೊಸಮನಿ, ಈರಣ್ಣ ಸಂಗೂರ, ಇತರರು ಹಾಜರಿದ್ದರು.