ಮಹಿಳಾ ಅನುಭವ ಅಧ್ಯಯನವಾಗಲಿ: ಚಂದ್ರಶೇಖರ್
ಹಾವೇರಿ: ಮಹಿಳೆಯರ ಅನುಭವದ ಎಲ್ಲ ಮುಖಗಳು ಅಧ್ಯಯನಕ್ಕೆ ಒಳಪಡಬೇಕು. ಮಹಿಳೆಯರು ಅನುಭವಿಸುವ ತಲ್ಲನ, ತಳಮಳಗಳು ಅಧ್ಯಯನದ ವಸ್ತುವಾಗಬೇಕೆಂದು ಹಂಪಿ ಕನ್ನಡ ವಿವಿ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಟಿ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿವಿಯಲ್ಲಿ ಪಿಎಚ್,ಡಿ ಸಂಶೋಧನಾ ಕೋರ್ಸ್ ವರ್ಕ್,ನ ಮೂರನೇ ದಿನದ ಗೋಷ್ಠಿಯಲ್ಲಿ ಭಾಗವಹಿಸಿ ಮಹಿಳಾ ಅಧ್ಯಯನಗಳು ವಿಷಯ ಕುರಿತು ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ಸ್ವ-ಹಿತಾಸಕ್ತಿ ಇಲ್ಲದೆ ಬದುಕುತ್ತಾಳೆ. ತನ್ನ ಜೀವನ ಇನ್ನೊಬ್ಬರಿಗಾಗಿಯೇ ಇದೆ ಎನ್ನುವ ಭ್ರಮೆಯನ್ನು ಹುಟ್ಟು ಹಾಕಲಾಗಿದೆ. ಇದು ಮಹಿಳೆಯನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲು ತೊಡಕಾಯಿತು ಎಂದು ವಿಷಾದಿಸಿದರು. ಪಶ್ಚಿಮದ ಪ್ರಭಾವದಿಂದ ಮಹಿಳಾ ಅಧ್ಯಯನ ನಮ್ಮಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಅರ್ಥಮಾಡಿಕೊಳ್ಳುವ ಕ್ರಮದಲ್ಲಿಯೇ ಲೋಪವಿದೆಯಾ ಮಹಿಳಾ ಲೋಕದ ಎಲ್ಲ ಬಗೆಯ ಅನುಭವಗಳನ್ನು ಯಾವ ನೆಲೆಯಿಂದ ಗ್ರಹಿಸಬೇಕು. ಅವರ ಅನುಭವ ಜಗತ್ತನ್ನು ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿಯೂ ಅಧ್ಯಯನ ಮಾಡುವ ಅಗತ್ಯವಾಗಿದೆ ಎಂದರು. ಆರ್ಥಿಕತೆ ಸಮಾನ ಅಭಿವೃದ್ಧಿಯನ್ನು ಅವಲಂಬಿಸಿದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ವಿಷಯ ಕುರಿತು ಪ್ರೊ. ಚಂದ್ರಪೂಜಾರಿ ಉಪನ್ಯಾಸ ನೀಡಿ, ಗ್ರಾಮೀಣ ಅಭಿವೃದ್ಧಿ ಹಳ್ಳಿಗಳನ್ನು ನೋಡುವ ಕ್ರಮದಿಂದ ನಿರ್ಧಾರವಾಗುವುದಿಲ್ಲ. ಜಾಗತೀಕರಣ ಪ್ರಭಾವದಿಂದ ಹಳ್ಳಿಗಳು ಹೊರಳು ಹಾದಿಯಲ್ಲಿವೆ. ಗ್ರಾಮಗಳು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಧಾರವಾಡ ಕವಿವಿಯ ಪ್ರೊ. ಆರ್.ಆರ್. ಬಿರಾದಾರ ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ವಿಷಯ ಕುರಿತು ಮಾತನಾಡಿ, ಭಾರತ ಹಳ್ಳಿಗಳಿಂದ ಕೂಡಿದ ದೇಶ. ಗ್ರಾಮೀಣ ಸುಧಾರಣೆಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವು ಜನಸಾಮಾನ್ಯರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಅಧ್ಯಯನಗಳು ತುಂಬಾ ಜವಾಬ್ದಾರಿಯಿಂದ ಕೂಡಿರಬೇಕಾಗಿದೆ ಎಂದು ಪ್ರತಿಪಾದಿಸಿದರು. ಸಂಗಮೇಶ ಗಣಿ ನಿರ್ವಹಿಸಿ, ವಂದಿಸಿದರು.