ರುಕ್ಮಿಣಿ ಸಾಹುಕಾರ್,ಗೆ ಟಿಕೆಟ್ ನೀಡುವಂತೆ ಪತ್ರ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ. 29
ಮೇ. 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ರಾಜ್ಯ ಎಐಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಫ್ಯಾಕ್ಸ್ ಮೂಲಕ ಪತ್ರ ರವಾನಿಸಿರುವುದಾಗಿ ತಾಲೂಕು ಕಾಂಗ್ರೆಸ್ ಮುಖಂಡ ಗೌಸುಖಾನ್ ಸೌದಾಗರ, ಇತರ 40 ಜನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 25 ವರ್ಷಗಳಿಂದ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಹಾಗೂ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರ ಏಳ್ಗೆಗಾಗಿ ಹಗಲಿರುಳು ದುಡಿಯುತ್ತಿರುವ ಹಾಗೂ ಎಐಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿಗಳಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಸಂಘಟನೆಗೆ ದುಡಿಯುತ್ತಿರುವ ರುಕ್ಮಿಣಿ ಸಾಹುಕಾರ ಅವರಿಗೆ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ರ್ಧಿಸಲು ಅವಕಾಶ ನೀಡಿದಲ್ಲಿ, ಅವರ ಗೆಲವಿಗೆ ಶ್ರಮಿಸುವುದಾಗಿ ಗೌಸುಖಾನ್ ಸೌದಾಗರ, ಎಸ್.ಕೆ. ಗಿರಡ್ಡಿ, ಎಂ.ವಿ. ಹೊಸರಿತ್ತಿ, ಎಲ್.ಸಿ. ಬಾವಿಕಟ್ಟಿ, ಯಲ್ಲಪ್ಪ ಬಂಡಿವಡ್ಡರ ಸೇರಿದಂತೆ 40 ಜನರು ಸಹಿ ಮಾಡಿರುವ ಪತ್ರವನ್ನು ಶುಕ್ರವಾರ ಸೋನಿಯಾ ಗಾಂಧಿಯವರಿಗೆ ಕಳುಹಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.