ಸ್ವಾಭಿಮಾನವಿದ್ರೆ ರಸಗೊಬ್ಬರ ತಿರಸ್ಕರಿಸಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 29
ರೈತರಲ್ಲಿ ಸ್ವಾಭಿಮಾನವಿದ್ದರೆ, ಹಾವೇರಿ ಗೋಲಿಬಾರ್ ಘಟನೆಯಲ್ಲಿ ರೈತರಿಬ್ಬರ ಜೀವ ಬಲಿ ತೆಗೆದುಕೊಳ್ಳಲು ಕಾರಣವಾದ ರಾಸಾಯನಿಕ ಗೊಬ್ಬರವನ್ನು ಇಂದಿನಿಂದಲೇ ತಿರಸ್ಕರಿಸಿ ಎಂದು ಕೃಷಿ ಪಂಡಿತ ಪುರಸ್ಕೃತ ಚನ್ನಬಸಪ್ಪ ಕೊಂಬಳಿ ಕರೆ ನೀಡಿದರು.
ಶುಕ್ರವಾರ ಪಟ್ಟಣದ ದೇಶಿಯ ಬೀಜ ಮಾರಾಟ ಮಳಿಗೆ ಆವರಣದಲ್ಲಿ ಎಎಂಇ ಫೌಂಡೇಶನ್,ನ ಬಾರ್ಡ್ ಹಾಗೂ ದೇಸಾಯಿ ಫೌಂಡೇಶನ್ ಆಶ್ರಯದಲ್ಲಿ ಕಲಘಟಗಿ ತಾಲೂಕಿನ ಕೃಷಿಕರಿಗಾಗಿ ಏರ್ಪಡಿಸಿದ್ದ ಸಾವಯವ ಕೃಷಿ ಪದ್ಧತಿಯಲ್ಲಿ ಸಿರಿಧಾನ್ಯ ಉತ್ಪಾದನೆ ಮಾಹಿತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ರಸಗೊಬ್ಬರಕ್ಕಾಗಿ ಮುಗಿಬಿದ್ದ ಸಿದ್ಧಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಅವರಿಬ್ಬರೂ ಸಾವಯವ ಕೃಷಿಕರಾಗಿದ್ದರೆ ಜೀವ ಕಳೆದುಕೊಳ್ಳುವ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದರು.
ಮಣ್ಣಿನಲ್ಲಿ ವಿಷ: ಹಸಿರು ಕ್ರಾಂತಿ ಪರಿಣಾಮ ಅಲ್ಪ ತೃಪ್ತನಾದ ದೇಶದ ಕೃಷಿಕ ಅನಿವಾರ್ಯವಾಗಿ ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಸಬೇಕಾಯಿತು. ಆದರೆ ಕೇವಲ 5 ದಶಕಗಳಲ್ಲಿ ಮಣ್ಣಿನಲ್ಲಿ ವಿಷದ ಪ್ರಮಾಣ ಸೇರಿಕೊಂಡು ಸತ್ವ ಕಳೆದುಕೊಂಡ ಭೂಮಿಗಳು ಬಂಜರಾಗುತ್ತಿವೆ. ರಸಗೊಬ್ಬರದ ಅತಿಯಾದ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ದೇಶ ಆಹಾರ ಕ್ಷಾಮ ಎದುರಿಸಬೇಕಾಗುತ್ತದೆ ಎಂದು ಚನ್ನಬಸಪ್ಪ ಕೊಂಬಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ಸ್ಥಗಿತ: ಸಾವಯವ ಗೊಬ್ಬರ ಹಾಗೂ ದೇಶೀಯ ಬೀಜ ಬಳಕೆ ಮಾಡುವ ಮೂಲಕ ಪಾರಂಪರಿಕ ಪದ್ಧತಿಯಲ್ಲಿ ಕೃಷಿ ನಡೆಸಿದಾಗ ಮಾತ್ರ ಮುಂದುವರಿಯಲು ಸಾಧ್ಯ. ಇಲ್ಲದಿದ್ದಲ್ಲಿ 20 ವರ್ಷಗಳಲ್ಲಿ ದೇಶದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನದಿಗಳು ವಿಷಯುಕ್ತ: ಕುಲಾಂತರಿ ಬೀಜ, ರಸಗೊಬ್ಬರ ಬಳಕೆಯಿಂದ ಎಂದಿನ ಇಳುವರಿ ಕಂಡುಕೊಳ್ಳಲಾಗದ ಕೃಷಿಕ ಸಾಲದ ಶೂಲದಲ್ಲಿ ಸಿಲುಕಿದ್ದಾನೆ. ಅತಿಯಾದ ರಸಗೊಬ್ಬರ ಬಳಕೆಯಿಂದ ಕೃಷಿಭೂಮಿ ಬಂಜರಾಗುತ್ತಿದ್ದು, ಇವುಗಳಿಂದ ಹರಿದ ನೀರು ನದಿಗಳಿಗೆ ಸೇರಿ ವಿಷಯುಕ್ತವಾಗುತ್ತಿದೆ ಎಂದರು.
ಸಾಲಮನ್ನಾ ಪರಿಹಾರವಲ್ಲ: ಕೃಷಿಗೆ ಉತ್ತೇಜನ ನೀಡುವ ಭರದಲ್ಲಿ ಸರ್ಕಾರಗಳು ಸಾಲ ಮನ್ನಾ ಮಾಡುವುದನ್ನು ಸ್ಥಗಿತಗೊಳಿಸಬೇಕು. ಇದರಿಂದ ಕೆಲವು ರೈತರಷ್ಟೇ ತೃಪ್ತರಾಗಬಹುದು. ಅದೇ ಅಂತಿಮ ಪರಿಹಾರವಲ್ಲ. ತಪ್ಪು ಕೃಷಿ ನೀತಿಯಿಂದಾಗಿ ರೈತ ಶ್ರಮಪಟ್ಟರೂ ಲಾಭದಾಯಕ ಎನಿಸುತ್ತಿಲ್ಲ. ಹೀಗಾಗಿ ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಪ ಖರ್ಚಿನ ಸಿರಿಧಾನ್ಯ: ಶ್ರೇಣಿಕರಾಜ ಯಳವತ್ತಿ ಮಾತನಾಡಿ, ಅಲ್ಪ ವೆಚ್ಚದ ಸಿರಿಧಾನ್ಯವನ್ನು ಬೆಳೆಯಲು ರೈತರು ಮುಂದಾಗಬೇಕು. ಇದರಿಂದ ಉತ್ತಮ ಇಳುವರಿ ಸಿಗುವ ಜತೆಗೆ ದೇಶದ ಆಹಾರ ಸಮಸ್ಯೆಯೂ ನೀಗಲಿದೆ. ಬೀಜಗಳಿಗಾಗಿ ಹಣ ವ್ಯಯಿಸದೆ ದೇಶೀಯ ತಳಿ ಬೀಜಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದರು.
ರೈತ ನಾಗಪ್ಪ ನಿಂಬೆಗೊಂದಿ ಮಾತನಾಡಿ, ರಾಗಿ, ಸಾವಿ, ನವಣೆ ಮುಂತಾದ ಕಿರುಧಾನ್ಯ ಬೆಳೆಯಿಲ್ಲದೆ ಆಹಾರ ಸಿಗದ ಪಕ್ಷಿ ಸಂಕುಲ ಕ್ಷೀಣಿಸುತ್ತಿದೆ. ಪಕ್ಷಿಗಳಲ್ಲದೆ ಇನ್ನುಳಿದ ಬೆಳೆಗಳಿಗೆ ಕ್ರಿಮಿಕೀಟದ ಬಾಧೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಓಂಕಾರಗೌಡ ಪಾಟೀಲ, ಮಹೇಶ ಖೋತ್, ಮೂಕಪ್ಪ ಪೂಜಾರ, ಫಕ್ಕೀರರಪ್ಪ ಅರಳೀಕಟ್ಟಿ, ಜಯಮ್ಮ ದೊಡ್ಡಗುಬ್ಬಿ, ಪುಷ್ಪಾ ಕಮ್ಮಾರ, ಸಿದ್ಧನಗೌಡ್ರ ಮುಂತಾದವರು ಉಪಸ್ಥಿತರಿದ್ದರು.