ಹಾನಗಲ್: ಉದಾಸಿ ವರ್ಸಸ್ ಕಾಂಗ್ರೆಸ್
ಹಾನಗಲ್ಲ: ಚುನಾವಣೆ ಕಾವು ಏರುತ್ತಿದ್ದಂತೆಯೇ ಜಿಲ್ಲೆಯ ಹಾನಗಲ್ಲ ಕ್ಷೇತ್ರದಲ್ಲಿ ಚುನಾವಣಾ ಬಿಸಿ ಏರುತ್ತಿದೆ. ಕೆಜೆಪಿಯಿಂದ ಮಾಜಿ ಸಚಿವ ಸಿ.ಎಂ. ಉದಾಸಿ ಹೆಸರು ನಿರ್ಧಾರವಾಗಿರುವುದನ್ನು ಬಿಟ್ಟರೆ, ಉಳಿದಂತೆ ಯಾವುದೇ ಪಕ್ಷಗಳ ಅಭ್ಯರ್ಥಿಗಳ ಹೆಸರು ಇದುವರೆಗೂ ಖಚಿತವಾಗಿಲ್ಲ. ಈ ಕುರಿತಂತೆ ಜಾತಿ ಲೆಕ್ಕಾಚಾರ ಹಾಗೂ ಪ್ರಭಾವ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಗೆ ಪ್ರಮುಖ ಮಾನದಂಡವಾಗಿ ಪರಿಣಮಿಸಿದೆ.
ಉದಾಸಿಗೆ ಕಾಂಗ್ರೆಸ್ ಅಭ್ಯರ್ಥಿಯೇ ಪ್ರಬಲ ಸ್ಪರ್ಧಿ: ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಕುರಿತಂತೆ ಇಡೀ ತಾಲೂಕಿನ ಜನತೆಯಲ್ಲಿ ಕುತೂಹಲ ಹೆಚ್ಚಿಸಿದೆ. ಕಳೆದ 7 ಚುನಾವಣೆಗಳಲ್ಲಿ ಪ್ರತಿ ಚುನಾವಣೆಗಳು ಇಲ್ಲಿ ಉದಾಸಿ ವರ್ಸಸ್ ಕಾಂಗ್ರೆಸ್ ಆಗಿಯೇ ನಡೆದಿವೆ. ಅಲ್ಲದೆ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಂದರೆ ವಿಧಾನಸಭಾ ಮಾಜಿ ಉಪ ಸಭಾಪತಿ ಮನೋಹರ ತಹಸೀಲ್ದಾರ್ ಎಂಬುದೇ ಜನಜನಿತ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್,ನಲ್ಲಿ ಹಲವರು ಟಿಕೆಟ್,ಗಾಗಿ ಯತ್ನಿಸಿ ಕೊನೆ ಹಂತದಲ್ಲಿ ಮತ್ತೆ ಮನೋಹರ ತಹಸೀಲ್ದಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ರೇಸ್,ನಲ್ಲಿ ಹಲವರು: ಈಗಾಗಲೇ ಹಾನಗಲ್ಲ ತಾಲೂಕಿನ ಟಿಕೆಟ್ ಆಕಾಂಕ್ಷಿಗಳಲ್ಲಿ ಮನೋಹರ ತಹಸೀಲ್ದಾರ್, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಮಾಜಿ ಜಿಪಂ ಉಪಾಧ್ಯಕ್ಷ ಜಿ.ಎಸ್. ಗಂಟೇರ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದವಲ್ಲದೆ, ಈ ಕುರಿತಂತೆ ಹೈಕಮಾಂಡ್,ಗೆ ಮನವರಿಕೆ ಮಾಡಿ ಸ್ಥಳೀಯವಾಗಿ ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಘೋಷಿಸಿದ್ದರು. ಆದಾಗ್ಯೂ ಹೊರಗಿನವರು ಈಗ ಹಾನಗಲ್ಲ ತಾಲೂಕಿನಲ್ಲಿ ತಮ್ಮ ಪ್ರಚಾರ ಆರಂಭಿಸಿದ್ದು, ತಮಗೆ ಟಿಕೆಟ್ ಖಚಿತ ಎಂದು ಹೇಳುವವರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸೊಲಬೇಶ್ವರಪ್ಪ, ಕೆಪಿಎಸ್,ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರ, ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ ಪ್ರಮುಖರಾಗಿದ್ದಾರೆ.
ಟಿಕೆಟ್,ಗಾಗಿ ಸರ್ಕಸ್: ಈ ನಡುವೆ ಬೆಂಗಳೂರು ಹಾಗೂ ದೆಹಲಿ ಹೈಕಮಾಂಡ್ ಬೆನ್ನು ಬಿದ್ದಿರುವ ಹಾನಗಲ್ಲ ತಾಲೂಕಿನ ಆಕಾಂಕ್ಷಿಗಳಿಗೆ ಟಿಕೆಟ್ ಗಗನ ಕುಸುಮವಾಗಿ ಕೌತುಕ ಹೆಚ್ಚಿಸಿದೆ. ಕಾಂಗ್ರೆಸ್ ಟಿಕೆಟ್ ಭಾರೀ ಪೈಪೋಟಿ ತಂದೊಡ್ಡಿದೆ. ಈ ಕುರಿತಂತೆ ಪ್ರತಿ ಅಭ್ಯರ್ಥಿಯೂ ತೆರೆಮರೆಯಲ್ಲಿ ಟಿಕೆಟ್ ಪಡೆಯಲು ಸರ್ಕಸ್ ನಡೆಸಿದ್ದಾರೆ.
ಏನೇ ಆದರೂ ಈ ಬಾರಿ ಪ್ರಬಲ ಪ್ರತಿಸ್ಪರ್ಧಿ ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಸಿ.ಎಂ. ಉದಾಸಿ ಅವರನ್ನು ಸಮರ್ಥವಾಗಿ ಮಣಿಸುವ ಅಭ್ಯರ್ಥಿ ಹುಡುಕಾಟದಲ್ಲಿ ಮುಖಂಡರೂ ತೊಳಲಾಡುವಂತಾಗಿದೆ. ಅಂತಿಂತ ಅಭ್ಯರ್ಥಿ ಬೇಡವೇ ಬೇಡ ಸಮರ್ಥರನ್ನೇ ನೀಡೋಣ ಎಂಬ ನಿಟ್ಟಿನಲ್ಲಿ ಮುಖಂಡರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು, ಬರುವ ವಾರದಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.
ಪಕ್ಷದ ಅಜೆಂಡಾದಂತೆ ಹಾನಗಲ್ಲಿನ ವಿಧಾನಸಭಾ ಕ್ಷೇತ್ರ ಲಿಂಗಾಯತರಿಗೆ ಎಂದು ಸ್ಪಷ್ಟಗೊಂಡಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲರಿಗೆ ಟಿಕೆಟ್ ಖಚಿತ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ತಾಲೂಕು ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಹಾನಗಲ್ಲ ತಾಲೂಕಿನಿಂದ ಹೊರಗಿನವರೆಂದು ಗುರುತಿಸಿಕೊಂಡಿರುವ ಸೊಲಭೇಶ್ವರಪ್ಪ ಲಿಂಗಾಯತರ ಲಾಬಿಯಲ್ಲಿ ಕಾಣಿಸಿಕೊಂಡಲ್ಲಿ ಆಶ್ಟರ್ಯ ಪಡುವಂತಿಲ್ಲ.
ಕಾರ್ಯಕರ್ತರಲ್ಲಿ ಕಾತರ: ಒಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹಾನಗಲ್ಲ ವಿಧಾನಸಭಾ ಕ್ಷೇತ್ರ ಚುನಾವಣೆ ವಿಷಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಶೀಘ್ರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದಲ್ಲಿ ಪ್ರಚಾರ ಕಾರ್ಯ ಸುಲಭವಾಗಲಿದೆ. ಇಲ್ಲದಿದ್ದಲ್ಲಿ ಪ್ರಚಾರ ಕಾರ್ಯಕ್ಕೆ ತೀವ್ರ ಅಡಚಣೆಯಾಗಿ ಫಲಿತಾಂಶಕ್ಕೆ ಮಾರಕವಾಗಲಿದೆ ಎಂಬುದು ಕಾರ್ಯಕರ್ತರ ಆತಂಕ. ಕೂಡಲೇ ಪಕ್ಷದ ಕಾರ್ಯಕರ್ತರಲ್ಲಿ ಚುನಾವಣೆ ರಂಗು ಮೂಡಿಸಲು ಅಭ್ಯರ್ಥಿ ಆಯ್ಕೆಯನ್ನು ಚಾತಕ ಪಕ್ಷಿಯಂತೆ ನಾಗರಿಕರು, ಕಾರ್ಯಕರ್ತರು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ.
-ಕಿರಣ ಮಾಸಣಗಿ