ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಚ್ಡಿಕೆ ಸಾಧನೆ ಜೆಡಿಎಸ್ ಗೆಲವಿಗೆ ಸಹಕಾರಿ

Lingaraj Badiger
Updated On : 2 May 2013, 11:58 am

ರಾಣಿಬೆನ್ನೂರು: ಉರಿಯುವ ಬಿಸಿಲನ್ನು ಲೆಕ್ಕಿಸದೆ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಜಯಘೋಷದ ಮದ್ಯ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಗೆಲುವಿಗಾಗಿ ನಟಿ ರಕ್ಷಿತಾ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು.
ರೋಡ್ ಶೋ ಕಾರ್ಯಕ್ರಮದ ನಂತರ ತಾಲೂಕು ಜೆಡಿಎಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದ ರೈತರ, ದೀನ ದಲಿತರ ಮಹಿಳೆಯರ ಹಾಗೂ ನಿರುದ್ಯೋಗಿಗಳ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಜನಪರ ಯೋಜನೆಗಳೆ ಜೆಡಿಎಸ್ ಅಭ್ಯರ್ಥಿಗಳ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದರು.
ಎಚ್ಡಿಕೆ ಸಿಎಂ ಸ್ಥಾನಕ್ಕೆ ಸಹಕರಿಸಿ: ದೆಹಲಿಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದ ಸಮಯದಲ್ಲಿ ತಪ್ಪಿತಸ್ಧರನ್ನು ಬಂಧಿಸುವಂತೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಿದ ಮಾದರಿಯಲ್ಲಿಯೇ ರಾಜ್ಯದ ಯುವ ಜನತೆ ಮೇ 5ರಂದು ನಡೆಯುವ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ತಪ್ಪದೆ ಮತದಾನ ಮಾಡುವುದರೊಂದಿಗೆ ಎಚ್.ಡಿ. ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡುವುದರೋಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೈಜೊಡಿಸಬೇಕು ಎಂದರು.
ಚಿತ್ರರಂಗ- ರಾಜಕೀಯಕ್ಕೂ ವ್ಯತ್ಯಾಸ
ನಾನು ಮೊದಲು ಚಿತ್ರರಂಗಕ್ಕೆ ಬಂದಿದ್ದ ಸಮಯದಲ್ಲಿ ಚಿತ್ರೀಕರಣದ ಸಮಯದಲ್ಲಿ ಮಾತ್ರ ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದೆ. ಚಿತ್ರೀಕರಣದ ಸಮಯದಲ್ಲಿ ಸೇರುವ ಜನಕ್ಕೂ ಹಾಗೂ ರಾಜಕೀಯವಾಗಿ ಮಾತನಾಡುವ ಸಮಯದಲ್ಲಿ ಸೇರುವ ಜನಕ್ಕೂ ಅಜಗಜಾಂತರ ಇದೆ ಎಂದ ಅವರು, ಮುಖ್ಯ ಬಣ್ಣ ಹಚ್ಚಿಕೊಂಡು ಪಾತ್ರ ಮಾಡುವುದಕ್ಕೂ ಹಾಗೂ ರಾಜಕೀಯವಾಗಿ ಜನತೆ ಸೇವೆ ಮಾಡುವುದಕ್ಕೂ ಇರುವ ವ್ಯತ್ಯಾಸ ನನ್ನ ಅನುಭವಕ್ಕೆ ಬಂದಿದೆ ಎಂದರು.
ತಕ್ಕಪಾಠ: ರಾಜಕೀಯವಾಗಿ ರಾಜ್ಯದ ಯುವ ಜನತೆಯ-ಮಹಿಳೆಯರ ಸೇವೆ ಮಾಡೋಣ ಎಂದು ಬಿಎಸ್ಸಾರ್ ಪಕ್ಷ ಸೇರಿಕೊಂಡಿದ್ದ ಸಮಯದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಸಂಸ್ಧಾಪಕರಾದ ಬಿ. ಶ್ರೀರಾಮುಲು ಅವರನ್ನು ಹೊರತುಪಡಿಸಿ ಕೆಲವು ಕಿಡಿಗೇಡಿಗಳು ನೀಡಿರುವ ಚಿಕ್ಕ-ಪುಟ್ಟ ತೊಂದರೆಯಿಂದ ಪಕ್ಷ ಬಿಟ್ಟು ಜೆಡಿಎಸ್ ಸೇರಿಕೊಂಡಿದ್ದು, ರಾಜ್ಯ ವಿಧಾನಸಭೆ ಚುನಾವಣೆ ನಂತರ ಬಿಎಸ್ಸಾರ್ ಪಕ್ಷದಲ್ಲಿ ನನಗೆ ತೊಂದರೆ ನೀಡಿದವರಿಗೆ ತಕ್ಕಪಾಠ ಕಲಿಸುತ್ತೇನೆ ಎಂದರು.
ನ್ಯಾಯಕ್ಕೆ ಜೆಡಿಎಸ್ ಬೆಂಬಲಿಸಿ: ರಾಜಕೀಯವಾಗಿ ರಾಜ್ಯದ ಜನತೆಯ ಸೇವೆ ಮಾಡಬೇಕೆಂದಿರುವ ನನಗೆ ಯೋಗ್ಯವೆಂದು ಕಂಡಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷದಲ್ಲಿ ನಾನಿಂದು ಗುರುತಿಸಿಕೊಂಡಿದ್ದು, ರಾಜ್ಯದ ಮಹಿಳೆಯರು ರಾಜಕೀಯದಲ್ಲಿ ನೆಲೆ ಕಾಣಬೆಕೆಂದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಮೀಸಲಿಟ್ಟಿರುವ ಸ್ಥಾನಮಾನಗಳನ್ನು ಪಡೆಯಬೇಕೆಂಬ ಹಂಬಲವಿದ್ದರೆ ಜೆಡಿಎಸ್ ಬೆಂಬಲಿಸಿ ಎಂದರು.
ಎಚ್.ಡಿ. ಕುಮಾರಸ್ವಾಮಿ 20 ತಿಂಗಳು ರಾಜ್ಯದ ಸಿಎಂ ಆಗಿದ್ದಾಗ ರಾಜ್ಯಾಭಿವೃದ್ಧಿಗಾಗಿ ಸಲ್ಲಿಸಿರುವ ಹಾಗೂ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಗಮನಿಸಿರುವ ರಾಜ್ಯದ ಸಮಸ್ತ ಜನತೆ ಜೆಡಿಎಸ್ ಅಭ್ಯರ್ಥಿಗಳಿಗೆ ಮತದಾನ ಮಾಡಲು ಮುಂದಾಗಬೇಕೆಂದು ವಿನಂತಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಸಿಸಿ ಸಣ್ಣಗೌಡ್ರ, ಜಿಲ್ಲಾ ಮುಖಂಡ, ನಿವೃತ್ತ ಪೋಲಿಸ್ ಅಧಿಕಾರಿ ಬಿ.ಬಿ. ಸಕ್ರಿ,ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ, ಅಲ್ಪಸಂಖ್ಯಾತ ಮುಖಂಡ ಮನವರುದ್ದಿನ ಕಮದೋಡ, ವನಿತಾ ಗುತ್ತಲ, ಚನ್ನಮ್ಮ ಗುರುಪಾದದೇವರಮಠ, ವಿನೋದ ಮಜ್ಜಗಿ, ಜ್ಯೋತಿ ಮಜ್ಜಗಿ, ಅರವಿಂದ ಗಂಗನಗೌಡ್ರ, ರಾಜಶೇಖರ ಹೊನ್ನಾಳಿ, ಜಿ.ಜಿ ಹೊಟ್ಟಿಗೌಡ್ರ, ಡಾ೤ ಸಂಜಯ ನಾಯ್ಕ, ಹನುಮಂತಪ್ಪ ಗೂಳಣ್ಣನವರ, ಉಜ್ಜಪ್ಪ ಹಾದಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement