ಬಿಜೆಪಿ, ಕೆಜೆಪಿ ತಿರಸ್ಕರಿಸಿ ಕೈ ಬೆಂಬಲಿಸಿ: ಶಿವಣ್ಣವರ
ಬ್ಯಾಡಗಿ: ಅಧಿಕಾರ ಸಿಕ್ಕ ಸಂದರ್ಭದಲ್ಲಿ ಕುರ್ಚಿಗಾಗಿ ಕಿತ್ತಾಡಿದ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿಯಾಗಿದ್ದಾಗ ಮಾಡದಿರುವ ಕಲ್ಯಾಣ ಕರ್ನಾಟಕದ ಕನಸು ಬಿಎಸ್‌ವೈಗೆ ಈಗ ಬಿದ್ದಿದೆ. ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡ ಬಿಜೆಪಿ, ಕೆಜೆಪಿಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಅಭ್ಯರ್ಥಿ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದ ಹೆಡಿಗ್ಗೊಂಡ ಗ್ರಾಮದಲ್ಲಿ ಬುಧವಾರ ಮತಯಾಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿಗೆ ಮತ ನೀಡಿದ ರಾಜ್ಯದ ಜನರು ಈಗ ಪರಿಪತಿಸುತ್ತಿದ್ದಾರೆ. ಅಧಿಕಾರ ವ್ಯಾಮೋಹ, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ ಬಿಜೆಪಿ ಸಚಿವರು ಹಾಗೂ ಶಾಸಕರು ಜೈಲು ಸೇರುವಂತಾಯಿತು ಎಂದರು.
ರೈತಪರ ಸರ್ಕಾರವೆಂದು ಬ್ರಾಂಡ್ ಪಡೆಯುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಸರ್ಕಾರ ರೈತರ ಮೇಲೆ ಗುಂಡು ಹಾರಿಸುವ ಮೂಲಕ ಕೈಸುಟ್ಟುಕೊಂಡಿತು. ಮತಕ್ಷೇತ್ರದ ವ್ಯಾಪ್ತಿಯ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಆರಂಭವಾಗಿ 10 ವರ್ಷ ಗತಿಸಿದರೂ ರೈತರಿಗೆ ನೀರು ಕೊಡಲು ಆಗಿಲ್ಲ ಎಂದರು.
ಜಿಲ್ಲಾಧ್ಯಕ್ಷ ಎಸ್.ಸಿ. ಶಿಡೇನೂರು, ತಾಲೂಕಾಧ್ಯಕ್ಷ ಹುಸೇನಸಾಬ್ ದೊಡ್ಮನಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಸುರೇಶಗೌಡ ಪಾಟೀಲ, ರಮೇಶ ಸುತ್ತಕೋಟಿ, ಸುರೇಶ ಮೆಣಸಿನಹಾಳ, ರುದ್ರಪ್ಪ ಹೊಂಕಣ, ಹನು ಮಗೌಡ್ರ ಪಾಟೀಲ ಉಪಸ್ಥಿತರಿದ್ದರು.