ಉಜ್ಜಯಿನಿ ಶ್ರೀಗಳಿಂದ ಮತದಾನ
ಕೊಟ್ಟೂರು: ಉಜ್ಜಯಿನಿ ಸದ್ಧರ್ಮಪೀಠದ 1008 ಜಗದ್ಗುರು ಸಿದ್ಧಲಿಂಗರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉಜ್ಜಿಯಿನಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮತ ಚಲಾಯಿಸಿದರು. ದೂರದೂರಿನಲ್ಲಿ ಇದ್ದ ಶ್ರೀ ಜಗದ್ಗುರುಗಳು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಉಜ್ಜಯಿನಿಯಲ್ಲಿ ಮತ ಹಾಕಲೆಂದೇ ಆಗಮಿಸಿ ಹಕ್ಕನ್ನು ಚಲಾಯಿಸಿದರು. ಈ ಸಂದರ್ಭಧಲ್ಲಿ 'ಕನ್ನಡಪ್ರಭ'ದೊಂದಿಗೆ ಭಾನುವಾರ ಮಾತನಾಡಿದ ಶ್ರೀಗಳು, ಜಗದ್ಗುರು ಸ್ಥಾನ ದೊರೆತ ನಂತರ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ ಎಂದ ಅವರು, ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆಂಬ ವಿಶ್ವಾಸವಿದೆ. ಮತದಾನದಿಂದ ಯಾರೂ ವಂಚಿತರಾಗಬಾರದು ಎಂದರು.
ಮದ್ಯ ಅಕ್ರಮ ಮಾರಾಟ: ಓರ್ವನ ಬಂಧನ
ಬಳ್ಳಾರಿ: ಸಂಗಮ್ ಸರ್ಕಲ್ ಸಮೀಪದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ, ಆತನಿಂದ ಒಂದು ಬಾಕ್ಸ್ ಮದ್ಯ ಹಾಗೂ ರು. 2000 ನಗದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಭಾಷಾ ಎಂದು ಗುರುತಿಸಲಾಗಿದೆ. ನಿಷೇಧಾಜ್ಞೆಯ ನಡುವೆಯೇ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ಬಾಷಾ ಎಂಬಾತನನ್ನು ಬಂಧಿಸಿ, ಆತನಿಂದ ಒಂದು ಬಾಕ್ಸ್ ಮದ್ಯ ಹಾಗೂ ರು. 2000 ನಗದು ವಶಪಡಿಸಿಕೊಂಡಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಹಂಚಿಕೆ: ಬಿಎಸ್ಸಾರ್ ಕಾರ್ಯಕರ್ತನ ಬಂಧನ
ಬಳ್ಳಾರಿ: ನಗರದ ರೇಡಿಯೋ ಪಾರ್ಕ್ನಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಣ ಹಂಚುತ್ತಿರುವ ಸಂದರ್ಭದಲ್ಲಿ ಓರ್ವನನ್ನು ಬಂಧಿಸಿ, ರು. 9750 ನಗದನ್ನು ಶನಿವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬಿಎಸ್ಆರ್ ಪಕ್ಷದ ಶ್ರೀನಿವಾಸ ಎಂದು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಹಣ ಹಂಚುತ್ತಿದ್ದ ಶ್ರೀನಿವಾಸ್ನನ್ನು ಬಂಧಿಸಿ, ರು. 9750 ವಶಪಡಿಸಿಕೊಂಡಿದ್ದಾರೆ. ಕೌಲ್ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓರ್ವನ ಬಂಧನ
ಬಳ್ಳಾರಿ: ಶ್ರೀರಾಂಪುರ ಕಾಲೋನಿಯಲ್ಲಿ ಕಾಂಗ್ರೆಸ್ ಪರ ಹಣ ಹಂಚುತ್ತಿದ್ದ ಓರ್ವನನ್ನು ಬಂಧಿಸಿ, ರು. 3500 ವಶಪಡಿಸಿಕೊಂಡಿದ್ದಾರೆ. ಬಂಧಿತನ್ನು ದಾದಾಪೀರ್ ಎಂದು ಗುರುತಿಸಲಾಗಿದೆ. ಈತನು ಶ್ರೀರಾಂಪುರ ಕಾಲೋನಿಯಲ್ಲಿ ಹಣ ಹಂಚುತ್ತಿರುವ ಸಂದರ್ಭದಲ್ಲಿ ಎಸ್ಪಿ ಡಾ. ಚಂದ್ರಗುಪ್ತಾ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ದಾದಾಪೀರ್ರನ್ನು ಬಂಧಿಸಿ, ರು. 3500 ವಶಪಡಿಸಿಕೊಂಡಿದ್ದಾರೆ. ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.