ಪ್ರದೀಪಗೌಡ ಕುಟುಂಬದಿಂದ ಮತದಾನ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 5
ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲೀಪಾಟೀಲ್ ಭಾನುವಾರ ತಮ್ಮ ಸ್ವಗ್ರಾಮ ಕವಲೂರಿನಲ್ಲಿ ಕುಟುಂಬ ಸಮೇತ ಮತದಾನ ಮಾಡಿದರು.
ಬೆಳಗ್ಗೆ ಕಿಲ್ಲೆದ ಹರಿಹರೇಶ್ವರ ದೇವಸ್ಥಾನದಲ್ಲಿ ಕುಟುಂಬ ಸಮೇತ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಸಮೀಪದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಬೂತ್ 1ರಲ್ಲಿ ತಮ್ಮ ತಾಯಿ ಅನ್ನಪೂರ್ಣಾ ದೇವಿ ಹಾಗೂ ಪತ್ನಿ ಮಲ್ಲಮ್ಮ ಪ್ರದೀಪಗೌಡ ಮಾಲೀಪಾಟೀಲ್ ಅವರೊಂದಿಗೆ ಮತದಾನ ಮಾಡಿದರು.
ಮತದಾರರ ದಿಕ್ಕು ತಪ್ಪಿಸಲು ಕುತಂತ್ರ
ಸೋಲಿನ ಭೀತಿಯಿಂದ ವಿರೋಧ ಪಕ್ಷಗಳ ಕೆಲ ನಾಯಕರು ತಮ್ಮೊಂದಿಗೆ ಪ್ರದೀಪಗೌಡ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಮತದಾರರ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲೀಪಾಟೀಲ್ ಕಿಡಿಕಾರಿದರು.
ಭಾನುವಾರ ತಮ್ಮ ಸ್ವಗ್ರಾಮ ಕವಲೂರಿನಲ್ಲಿ ಮತದಾನ ಮಾಡಿ ನಂತರ ಮಾತನಾಡಿದ ಅವರು, ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ನಾವು ಬೇರೆ ಪಕ್ಷದವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂಬ ಗಾಸಿಪ್ ಸುದ್ದಿ ಹಬ್ಬಿಸಿದ್ದಾರೆ. ಇಂತಹ ಕುತಂತ್ರ ರಾಜಕಾರಣ ನಮ್ಮಿಂದ ಮಾಡಲಾಗದು. ಅಂತಹ ಕನಿಷ್ಠ ರಾಜಕೀಯ ತಮಗೆ ತಿಳಿದಿಲ್ಲ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.