ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅದೃಷ್ಟಲಕ್ಷ್ಮಿ ಯಾರ ಪಾಲಿಗೆ?

Vishwanath S
Updated On : 8 May 2013, 3:37 am

ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 7
ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನದ ಮತ ಎಣಿಕೆ ಬುಧವಾರ(ಮೇ 8)ದಂದು ನಡೆದಿದ್ದು, ಅದೃಷ್ಟ ಲಕ್ಷ್ಮಿ ಯಾರಿಗೆ ವಲಿದ್ದಾಳೆ ಎಂಬ ಕುತೂಹಲ ಗರಿಗೆದರಿದೆ.
ಬಿಸಿಲಿನ ತಾಪದಂತೆಯೇ ಫಲಿತಾಂಶದ ಕಾವು ಜಿಲ್ಲಾದ್ಯಂತ ವ್ಯಾಪಿಸಿಕೊಂಡಿದ್ದು, ಆಯಾ ಪಕ್ಷಗಳ ಕಾರ್ಯಕರ್ತರಿಂದ ಹಿಡಿದು ಶ್ರೀಸಾಮಾನ್ಯರವರೆಗೂ ಫಲಿತಾಂಶ ಕುರಿತಂತೆ ವಿವಿಧ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.
ಇಂದು (ಮೇ 8ರ) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯಕ್ರಮ ನಡೆಸುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧಗೊಂಡಿದ್ದು, ಅಹಿತಕರ ಘಟನೆಗಳು ಸಂಭವಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೊಬಸ್ತ್ ಏರ್ಪಡಿಸಿದೆ.
ಚಿಂತೆಯಲ್ಲಿ ಅಭ್ಯರ್ಥಿಗಳು: ಮತದಾನ ಪ್ರಕ್ರಿಯೆ ಮೇ 5ರಂದೇ ಪೂರ್ಣಗೊಂಡಿದೆಯಾದರೂ ವಿವಿಧ ಪಕ್ಷಗಳ ಅಭ್ಯರ್ಥಿ ಹಾಗೂ ನಾಯಕರ ಮೊಗದಲ್ಲಿ ನೆಮ್ಮದಿ ಮಾತ್ರ ಈವರೆಗೂ ಕಾಣುತ್ತಿಲ್ಲ. ಯಾವುದೇ ಪಕ್ಷದ ಅಭ್ಯರ್ಥಿಗಳು ಎದೆತಟ್ಟಿಕೊಂಡು ಗೆಲವು ತಮ್ಮದೇ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ.
ಮಾಧ್ಯಮದ ಎದುರು ತಮ್ಮ ಗೆಲವು ಶತಸಿದ್ಧ ಎಂದು ರಾಜಕೀಯ ನಾಯಕರು ಹೇಳಿಕೊಳ್ಳುತ್ತಿದ್ದಾರಾದರೂ, ಒಳಗೊಳಗೆ ಫಲಿತಾಂಶ ಏನಾಗಬಹುದೋ ಏನೋ ಎಂಬ ಚಿಂತೆ ಅವರನ್ನು ಕಾಡುತ್ತಿರುವುದು ಮಾತ್ರ ಸುಳ್ಳಲ್ಲ.
ಜ್ಯೂತಿಷಿಗಳ ಮೊರೆ: ಕೆಲ ಅಭ್ಯರ್ಥಿಗಳು ಫಲಿತಾಂಶದ ಪೂರ್ವವೇ ತಮ್ಮ ಗೆಲವು ನಿಶ್ಚಿತವೇ? ಗೆಲವು ಸಾಧಿಸಿದರೂ ಎಷ್ಟು ಮತಗಳ ಅಂತರದಿಂದ ಗೆಲವು ಸಾಧಿಸಬಹುದು ಎಂಬ ಲೆಕ್ಕಾಚಾರ ಮತ್ತಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.
ಇನ್ನೂ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣೆ ನಂತರದ 3 ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲ. ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿಂತಿರುವ ಮಾಜಿ ಶಾಸಕರುಗಳು ಮಾತ್ರ ತಮಗೆ ಈ ವಾರ್ಡ್‌ನಿಂದ ಇಷ್ಟು ಮತಗಳು ಬರುವುದು ಗ್ಯಾರಂಟಿ. ಅಲ್ಲದೇ, ಒಂದೇ ಕೋಮಿಗೆ ಸೇರಿದ ಜನರೆ ಹೆಚ್ಚಾಗಿ ವಾಸವಾಗಿರುವ ಆ ಪ್ರದೇಶದ ಮತಗಳೆಲ್ಲವೂ ತಮ್ಮ ಗೆಲುವಿಗೆ ಟ್ರಂಪ್ ಕಾರ್ಡ್ ಆಗುವುದರಲ್ಲಿ ನಿಸ್ಸಂದೇಹ ಎಂಬ ಲೆಕ್ಕಾಚಾರದ್ದಲ್ಲಿ ತೊಡಗಿದ್ದಾರೆ.
ಗೆಲುವಿಗೆ ಅಡ್ಡಿ!: ಇನ್ನೂ ವಿವಿಧ ರಾಜಕೀಯ ಪಕ್ಷಗಳಲ್ಲಿ ದಶಕಗಳ ಕಾಲ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದರೂ, ಪಕ್ಷ ಗುರುತಿಸಿ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದರಿಂದ ಆಕ್ರೋಶಗೊಂಡು ಕೆಲವರು ಬಂಡಾಯದ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.
ಇಂತಹ ಅಭ್ಯರ್ಥಿಗಳಿಗೆ ತಮ್ಮ ಗೆಲವಿಗಿಂತಲೂ ಎದುರಾಳಿ ಅಭ್ಯರ್ಥಿ ಗೆಲುವಿಗೆ ಅಡ್ಡಿಯನ್ನುಂಟು ಮಾಡಿದರೂ ಸಾಕು ಎಂಬ ಭಾವನೆ ಹೊಂದಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದು ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ನೆಮ್ಮದಿಗೆ ಸ್ವಲ್ಪ ಮಟ್ಟಿಗೆ ಭಂಗ ತಂದಿರುವುದು ಸುಳ್ಳಲ್ಲ.
ಹಾವೇರಿಯತ್ತ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಹುಟ್ಟು ಹಾಕಿದ್ದೆ ಹಾವೇರಿ ಜಿಲ್ಲೆಯಲ್ಲಿ ಎಂಬುದು ಗಮನಾರ್ಹ. ಪ್ರಸಕ್ತ ಚುನಾವಣೆಯಲ್ಲಿ ಕೆಜೆಪಿಗೆ ರಾಜ್ಯದಲ್ಲೇ ಅತಿ ಹೆಚ್ಚು ಸ್ಥಾನಗಳನ್ನು ತಂದುಕೊಡುವ ಜಿಲ್ಲೆ ಎಂದೆ ಈವರೆಗೆ ವಿಶ್ಲೇಷಿಸಲಾಗಿದೆ.
ಇದರಿಂದಾಗಿ ಸಹಜವಾಗಿಯೇ ಇಡೀ ರಾಜ್ಯದ ಜನರ ಚಿತ್ತ ಹಾವೇರಿಯತ್ತ ನೆಡುವಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸು ಸಾಧಿಸಿರುವ ಮಾಜಿ ಸಚಿವ, ಹಾನಗಲ್‌ನ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮ್ಮದೇ ಆದ ಸ್ಟ್ಯಾಟರ್ಜಿಯಲ್ಲಿ ಕೆಲಸ ಮಾಡಿದ್ದಾಗಿದೆ.
ಪಾನಬೀಡಾ ಅಂಗಡಿ: ಪಾನಬೀಡಾ ಅಂಗಡಿ ಸೇರಿದಂತೆ ಸಣ್ಣಪುಟ್ಟ ಚಹಾ ಅಂಗಡಿಗಳು ಮಂಗಳವಾರ ಇಡೀ ದಿನ ಬಿಸಿಬಿಸಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದವು. ಇನ್ನೂ ಕೆಲವರು ಈ ಕ್ಷೇತ್ರದಲ್ಲಿ ಇದೇ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸುವುದು ಶತಸಿದ್ಧ ಎಂಬ ವಾದಕ್ಕೆ ಅಂಟಿಕೊಂಡು ಬೆಟ್ಟಿಂಗ್‌ಗೂ ಮುಂದಾದ ಉದಾಹರಣೆಗಳು ಕಂಡು ಬಂದಿವೆ.
ಒಟ್ಟಾರೆ ಏನೆ ಇರಲಿ, ಅದೃಷ್ಟ ಲಕ್ಷ್ಮಿ ಯಾವ ಪಕ್ಷದ ಅಭ್ಯರ್ಥಿಗಳ ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಧ್ಯಾಹ್ನದ ಹೊತ್ತಿಗೆ ಎಲ್ಲವೂ ಸಾಕ್ಷಾತ್ಕಾರವಾಗಲಿದೆ.

-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement