ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದ್ವಿತೀಯ ಪಿಯುಸಿ: ದೀಪಾ ಯಾಳಗಿಶೆಟ್ಟರ್ ಜಿಲ್ಲೆಗೆ ಪ್ರಥಮ

Vishwanath S
Updated On : 8 May 2013, 3:36 am

ಗದಗ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ದೀಪಾ ಯಾಳಗಿಶೆಟ್ಟರ ಶೇ. 95.5 (ಪಿಸಿಎಂಬಿ ಶೇ 96.7) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅಭಿಲಾಷ್ ಸೋಗಿ ಶೇ. 94.5 (ಪಿಸಿಎಂಬಿ ಶೇ. 95) ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಶ್ವೇತಾ ಅರಕೇರಿ ಶೇ. 89 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಪ್ರದೀಪ್ ಶೇಟ್ ಶೇ. 92 ಪ್ರಥಮ, ಸುಧಾ ರಡ್ಡೇರ್ ಶೇ. 85.3 ದ್ವಿತೀಯ ಹಾಗೂ ಸವಿತಾ ಮುದೇನಗುಡಿ ಶೇ. 84.66 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಗಿರಿಜಾ ಕೋಟೆನ್ನವರ ಶೇ. 86.66 ಪ್ರಥಮ, ವಿರೇಶ್ ಬೀಳಗಿ ಶೇ. 83.66 ದ್ವಿತೀಯ ಹಾಗೂ ಶ್ರೀದೇವಿ ಕಲಕೇರಿ ಶೇ. 83.5 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಕಾಲೇಜಿನ ಒಟ್ಟು ಫಲಿತಾಂಶ ಶೇ. 92, ವಾಣಿಜ್ಯ ವಿಭಾಗದ ಒಟ್ಟು ಶೇ. 85, ಹಾಗೂ ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ. 85 ರಷ್ಟಾಗಿದೆ. ಕಾಲೇಜಿನಲ್ಲಿ ಒಟ್ಟು 185 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 8 ಡಿಸ್ಟಿಂಕ್ಷನ್, 85 ಪ್ರಥಮ ವರ್ಗ, 42 ದ್ವಿತೀಯ ವರ್ಗ ಹಾಗೂ 25 ತೃತೀಯ ವರ್ಗದಲ್ಲಿ ತೇರ್ಗಡೆಯಾಗಿದ್ದಾರೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎಸ್. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮೋ ಪಲ್ಟಿ: ಇಬ್ಬರ ಸಾವು
ಲಕ್ಷ್ಮೇಶ್ವರ: ಟಾಟಾ ಸುಮೋ ವಾಹನದ ಟೈರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿ ಇಬ್ಬರು ಮೃತಪಟ್ಟು, 8 ಜನ ಗಾಯಗೊಂಡಿರುವ ಘಟನೆ ಗೊಜನೂರ ಮತ್ತು ಮಾಗಡಿಯ ಮಧ್ಯೆ ಮಂಗಳವಾರ ಸಂಭವಿಸಿದೆ. ಮೃತಪಟ್ಟವರು ಮುಳಗುಂದದ ಬೀಬಿಜಾನ್ ಕಮತಗಿ (50) ಹಾಗೂ ಮರೆಂಬಿ ನನ್ನೆಸಾಬ ಮಕಾಂದಾರ (65) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಳಗುಂದ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಇವರು ಹಾವೇರಿ ಜಿಲ್ಲೆಯ ಮುಗದೂರ ಗ್ರಾಮಕ್ಕೆ ವಲೀಮಾ ಕಾರ್ಯಕ್ಕೆ ಟಾಟಾ ಸುಮೋ ವಾಹನದಲ್ಲಿ ಹೊರಟಿದ್ದರು ಎನ್ನಲಾಗಿದೆ. ಮೇ 6 ರಂದು ಮುಳಗುಂದ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮಂಗಳವಾರ ಮಧ್ಯಾಹ್ನ ಮುಳಗುಂದ ಗ್ರಾಮದಿಂದ ಮುಗದೂರ ಗ್ರಾಮಕ್ಕೆ ಹೊರಟ ಕೇವಲ 15 ನಿಮಿಷಗಳ ಅವಧಿಯಲ್ಲಿ ಅಪಘಾತ ನಡೆದಿದೆ. ತೀವ್ರ ಗಾಯಗೊಂಡಿದ್ದ ಮರೆಂಬಿ ಮಕಾಂದಾರ ಹಾಗೂ ಬೀಬಿಜಾನ ಕಮತಗಿಯವರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. 8 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ವಿರೂಪಾಕ್ಷಪ್ಪ ನಿಧನ
ಹಾವೇರಿ: ಹಾವೇರಿ ಲಯನ್ಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ವಿರೂಪಾಕ್ಷಪ್ಪ ಬಿ. ಕುರುಬಗೊಂಡಶೆಟ್ರ (68) ಮಂಗಳವಾರ ರಾತ್ರಿ ನಿಧನರಾದರು.ಮೃತರಿಗೆ ಪತ್ನಿ ಇದ್ದಾರೆ. ವಿರೂಪಾಕ್ಷಪ್ಪ ಕುರುಬಗೊಂಡಶೆಟ್ರ ಕಾರ್ಡ್‌ಮಮ್ ಬ್ಯಾಂಕಿನ ಚೇರ್‌ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರ ಅಂತ್ಯಕ್ರಿಯೆ ದೇವಿಹೊಸೂರು ಗ್ರಾಮದಲ್ಲಿ ನೇರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಕಾರ್ಡ್‌ಮಮ್ ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ತೀವ್ರ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement