ಪಿಯು ಫಲಿತಾಂಶ: ಹಾವೇರಿಗೆ 8ನೇ ಸ್ಥಾನ
ಹಾವೇರಿ: 2013ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆಯ 7060 ವಿದ್ಯಾರ್ಥಿಗಳು ಪಾಸಾಗಿದ್ದು, ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ.
ಫಲಿತಾಂಶದಲ್ಲಿ ಕಳೆದ ಬಾರಿಯೂ ಆ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಆರ್. ಕೊಣ್ಣೂರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 9276 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 7060 ವಿದ್ಯಾರ್ಥಿಗಳು ಪಾಸಾಗಿ ಶೇ. 76.11ರಷ್ಟು ಫಲಿತಾಂಶ ಹೊರಬಿದ್ದಿದೆ. ಪರೀಕ್ಷೆಗೆ ಕುಳಿತ 5915 ಬಾಲಕರ ಪೈಕಿ 3439 ವಿದ್ಯಾರ್ಥಿಗಳು ಪಾಸಾಗಿದ್ದು, 5785 ವಿದ್ಯಾರ್ಥಿನಿಯರ ಪೈಕಿ 4274 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 75ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ. 64.03ರಷ್ಟು ಪಾಸಾಗಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಶೇ. 78.01ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಶೇ. 74.74ರಷ್ಟಿದೆ.
ಜಿಲ್ಲೆಯಲ್ಲಿ ಐದು ಕಾಲೇಜುಗಳು ಶೇಕಡಾ 100ರಷ್ಟು ಉತ್ತೀರ್ಣತಾ ಪ್ರಮಾಣ ಸಾಧಿಸಿದ್ದು, ಇದರಲ್ಲಿ ಶಿಗ್ಗಾಂವಿ ತಾಲೂಕಿನ ನಾರಾಯಣಪುರ ಹಾಗೂ ಶಿಗ್ಗಾಂವಿಯ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಹಾಗೂ ರಾಣಿಬೆನ್ನೂರು ತಾಲೂಕಿನ ಕುಮಾರಪಟ್ನಂನ ಪಾಲಿಫೈಬರ್ ಪದವಿಪೂರ್ವ ಕಾಲೇಜು ಮತ್ತು ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಪಿವಿಎಸ್ ಪದವಿಪೂರ್ವ ಕಾಲೇಜು ಸೇರಿದೆ. ಕಲಾ ವಿಭಾಗದಲ್ಲಿ ತುಮ್ಮಿನಕಟ್ಟಿಯ ಎಸ್ಎಸ್ಬಿ ಪದವಿಪೂರ್ವ ಕಾಲೇಜಿನ ಸುಮಾ ಕಂಚಿಕೊಪ್ಪದ ಅವರು 566 ಅಂಕಗಳೊಂದಿಗೆ ಶೇ. 94.33ರಷ್ಟು ಸಾಧನೆಗೈದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಮೂರು ವಿದ್ಯಾರ್ಥಿಗಳು ಶೇ. 93.5ರಷ್ಟು ಸಾಧನೆ ಗೈದಿದ್ದು, ಸಾಧನೆಗೈದ ಕಾರ್ತಿಕ ತಾಂಡೇಲ, ಕುಮಾರಿ ನಾಗಶ್ರೀ ಎ.ಸಿ. ಹಾಗೂ ಗೀತಾಂಜಲಿ ಎನ್ ಅವರು ಕುಮಾರಪಟ್ಟಣಂನ ಪಾಲಿಫೈಬರ್ ಪದವಿಪೂರ್ವ ಕಾಲೇಜಿಗೆ ಸೇರಿದವರಾಗಿರುವುದು ವಿಶೇಷ. ವಿಜ್ಞಾನ ವಿಭಾಗದಲ್ಲೂ ಇದೇ ಕಾಲೇಜಿನ ಕುಮಾರ ವರುಣ ಎಂ. ಅಂಗಡಿ ಶೇ. 97.33ರಷ್ಟು ಸಾಧನೆಗೈದಿರುವುದು ಇನ್ನೊಂದು ವಿಶೇಷವಾಗಿದೆ ಎಂದು ಉಪನಿರ್ದೇಶಕ ಆರ್.ಆರ್. ಕೊಣ್ಣೂರು ತಿಳಿಸಿದ್ದಾರೆ.