ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 7
ಮೇ 5ರಂದು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಜರುಗಿದ ಚುನಾವಣೆಯ ಮತಗಳ ಎಣಿಕೆ ಮೇ 8ರಂದು ನಗರದ ಹೊರ ವಲಯದಲ್ಲಿರುವ ಸರ್ಕಾರಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಆರಂಭಗೊಳ್ಳಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.
ಮಂಗಳವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮತ ಎಣಿಕೆ ಕಾರ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮತ ಎಣಿಕೆ ಕೊಠಡಿಗಳನ್ನು ಅಣಿಗೊಳಿಸಲಾಗಿದ್ದು, ಈ ಕೊಠಡಿಗಳ ಎದುರಿಗಿರುವ ಸ್ಟ್ರಾಂಗ್ ರೂಂಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಲಾಗಿದೆ.
18 ಸುತ್ತು ಎಣಿಕೆ: ಬೆಳಗ್ಗೆ 7.30ಕ್ಕೆ ಮತ ಎಣಿಕೆಗೆ ನಿಯುಕ್ತಿಗೊಂಡ ಸಿಬ್ಬಂದಿ ಆಯಾ ಕೊಠಡಿಗಳಲ್ಲಿ ಎಣಿಕೆಗೆ ಸನ್ನದ್ಧರಾಗಿರುತ್ತಾರೆ. 8.30ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆದು ಮತಯಂತ್ರಗಳನ್ನು ಎಣಿಕೆಗಾಗಿ ಮತ ಎಣಿಕೆ ಕೊಠಡಿಗೆ 16ರಿಂದ 18 ಸುತ್ತುಗಳಲ್ಲಿ ಕಳಿಸಲಾಗುವುದು. ವಿದ್ಯುನ್ಮಾನ ಮತಯಂತ್ರದ ಎಣಿಕೆಗೆ ಮುಂಚೆ 8 ಗಂಟೆಗೆ ಅಂಚೆಮತ ಪತ್ರಗಳ ಎಣಿಕೆ ನಡೆಸಲಾಗುವುದು. ಮತ ಎಣಿಕೆಯ ಪ್ರತಿ ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಇರಿಸಲಾಗಿದ್ದು, ಪ್ರತಿ ಟೇಬಲ್‌ಗೆ ಒಬ್ಬ ಎಣಿಕೆ ಸೂಪರ್‌ವೈಜರ್, ಎಣಿಕೆ ಸಹಾಯಕರು, ಒಬ್ಬ ಮೈಕ್ರೋ ವೀಕ್ಷಕರು ಮತ್ತು ಡಿ ದರ್ಜೆ ನೌಕರ ಇದ್ದು, ವಿದ್ಯುನ್ಮಾನ ಮತಯಂತ್ರದಲ್ಲಿನ ಮತ ಎಣಿಕೆ ನಿಭಾಯಿಸುತ್ತಾರೆ. ಎಲ್ಲ ರಾಜಕೀಯ ಪಕ್ಷಗಳ ಪೋಲಿಂಗ್ ಏಜೆಂಟರಿಗೂ ಅಲ್ಲಿ ಉಪಸ್ಥಿತರಿರಲು ಸೂಕ್ತ ಏರ್ಪಾಡು ಮಾಡಲಾಗಿದೆ.
ಆಯಾ ಕ್ಷೇತ್ರಗಳ ಮತ ಪ್ರಮಾಣ ಆಧರಿಸಿ ಮತಗಳ ಎಣಿಕೆ 16ರಿಂದ 18 ಸುತ್ತುಗಳಲ್ಲಿ ನಡೆಯಲಿದೆ. ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮತ ಎಣಿಕೆ ಕಾರ್ಯದ ಕಾನೂನು ಸುವ್ಯವಸ್ಥೆ ಪಾಲನೆಗೆ 300 ಸಿಆರ್‌ಪಿಎಫ್ ಹಾಗೂ ಪೊಲೀಸ್ ಪಡೆ ನಿಯುಕ್ತಿಗೊಂಡಿದ್ದು, 600 ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರವೇಶ ನಿಷೇಧ: ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಅಭ್ಯರ್ಥಿ ಮತ್ತು ಅವರ ಏಜೆಂಟರು, ಜಿಲ್ಲಾ ಆಡಳಿತದಿಂದ ಎಣಿಕೆ ಕಾರ್ಯಕ್ಕೆ ನಿಯುಕ್ತಿಗೊಂಡ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿದ್ದು, ಎಣಿಕೆ ಕೇಂದ್ರಲ್ಲಿ ಪ್ರವೇಶಕ್ಕೆ ಚುನಾವಣಾಧಿಕಾರಿಗಳ ಗುರುತಿನ ಚೀಟಿ ತೋರಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ನಿಷೇಧಾಜ್ಞೆ: ಶಾಂತಿ ಹಾಗು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾದ್ಯಂತ ಮೇ 8ರಂದು ಬೆಳಗ್ಗೆ 6ರಿಂದ ರಾತ್ರಿ 11ರ ವರೆಗೆ ಸಿಆರ್‌ಪಿಸಿ 144ನೇ ಕಲಂ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 5ಕ್ಕಿಂತ ಹೆಚ್ಚು ಜನರು ಕೂಡಿ ತಿರುಗಾಡುವುದು ಮತ್ತು ಯಾವುದೇ ತರಹದ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಹಾಗೂ ವಿಜಯೋತ್ಸವ, ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮೊಬೈಲ್ ನಿಷೇಧ: ಸುರಕ್ಷತೆ ದೃಷ್ಟಿಯಿಂದ ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ತರುವುದನ್ನು ನಿಷೇದಿಸಲಾಗಿದೆ. ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳನ್ನುಳಿದು ಬೇರೆ ವಾಹನಗಳಿಗೆ ಎಣಿಕೆ ಕೇಂದ್ರದ ಆವರಣದಲ್ಲಿ ಪ್ರವೇಶವನ್ನು ಸಹ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದರು.
ಮಾಧ್ಯಮ ಕೇಂದ್ರ: ಮತ ಎಣಿಕೆ ಪ್ರಕ್ರಿಯೆಯನ್ನು ಕಾಲಕಾಲಕ್ಕೆ ವರದಿ ಮಾಡಲು ಅನುಕೂಲವಾಗುವಂತೆ ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳಿಗೆ ಕ್ಷಣ ಕ್ಷಣದ ಮಾಹಿತಿಯನ್ನು ಒದಗಿಸಲು ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಎನ್‌ಐಸಿ ಅಧಿಕಾರಿ ಮಾಶಾಳ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಶಿಗ್ಗಾಂವಿ ಸಂತೆ ಮುಂದೂಡಿಕೆ: ಮೇ 8ರಂದು ಚುನಾವಣಾ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು 144ನೇ ಕಲಮಿನನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಶಿಗ್ಗಾಂವಿಯಲ್ಲಿ ನಡೆಯಬೇಕಿದ್ದ ಸಂತೆಯನ್ನು ರದ್ದುಗೊಳಿಸಿ ಜಿಲ್ಲಾ ದಂಡಾಧಿಕಾರಿ ವಿ. ಅನ್ಬುಕುಮಾರ ಅವರು ಆದೇಶ ಹೊರಡಿಸಿದ್ದಾರೆ.