3ನೇ ಬಾರಿ ಸೋತ ಖಾದ್ರಿ
ಶಿಗ್ಗಾಂವಿ: ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸತತ ಎರಡನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್ನ ಅಜ್ಜಂಪೀರ ಖಾದ್ರಿ ಮೂರನೇ ಬಾರಿಗೆ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಗುರು-ಶಿಷ್ಯದ ಕಾಳಗದ ಕಣ ಎಂದೇ ಬಿಂಬಿತವಾಗಿದ್ದ ಶಿಗ್ಗಾಂವಿ ಮತಕ್ಷೇತ್ರದಲ್ಲಿ ಜನತೆ ಅಭಿವೃದ್ಧಿ ಕಾರ್ಯಗಳಿಗೆ ಮಣೆ ಹಾಕಿದ್ದಾರೆ. ಜಲಸಂಪನ್ಮೂಲ ಸಚಿವರಾಗಿ ಕ್ಷೇತ್ರದಲ್ಲಿ ಭೂಮಿತಾಯಿಗೆ ಹಸಿರು ಸೀರೆ ಉಡಿಸಿದ ಬೊಮ್ಮಾಯಿ ಅವರನ್ನು ಎರಡನೇ ಬಾರಿಗೆ ಶಾಸಕರನ್ನಾಗಿ ಮಾಡಿದ್ದಾರೆ.
ವಿಜಯೋತ್ಸವ: ಬಂಕಾಪುರ ಸಮೀಪ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗಮನಕ್ಕೆ ಕಾದರು. ಬೊಮ್ಮಾಯಿ ಬರುವುದು ತಡವಾದರೂ ಹರ್ಷೋದ್ಘಾರಕ್ಕೆ ಕೊರತೆಯಾಗಲಿಲ್ಲ. ಗುಲಾಲು ಎರಚಿ, ಬೈಕ್ಗಳಿಗೆ ಬಿಜೆಪಿ ಬಾವುಟ ಕಟ್ಟಿದ ಕಾರ್ಯಕರ್ತರು ಸಂಭ್ರಮಿಸಿದರು. ಬೊಮ್ಮಾಯಿ ಬಂದಾಗ 'ಬೊಮ್ಮಾಯಿಯವರಿಗೆ ಜಯವಾಗಲಿ' ಎಂದು ಘೋಷಣೆ ಕೂಗಿ ಗುಲಾಲು ಎರಚಿ, ತಮ್ಮ ಸಂತೋಷ ವ್ಯಕ್ತಪಡಿಸಿದರು. ಜನತೆ ಪಟಾಕಿ ಸಿಡಿಸಿ, ಬಣ್ಣ ಎರಚಿ ಕುಣಿದಾಡಿದರು. ಬಸವರಾಜ ಬೊಮ್ಮಾಯಿ ಅವರನ್ನು ಟ್ರ್ಯಾಕ್ಟರ್ ಹತ್ತಿಸಿ ಪಟ್ಟಣದಲ್ಲಿ ನೂರಾರು ವಾಹನಗಳೊಂದಿಗೆ ಮೆರವಣಿಗೆ ಮಾಡಿದರು.