ಅಭಿಪ್ರಾಯಕ್ಕೆ ತಲೆಬಾಗುತ್ತೇನೆ
ಮತದಾರ ಪ್ರಭುಗಳು ನೀಡಿರುವ ಅಭಿಪ್ರಾಯಕ್ಕೆ ತಲೆಬಾಗುತ್ತೇನೆ. ಚುನಾವಣೆಯಗಳು ಎಂದ ಮೇಲೆ ಸೋಲು-ಗೆಲುವುಗಳು ಸಾಮಾನ್ಯ. ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವೇನು ಎಂಬುದನ್ನು ತಿಳಿದುಕೊಂಡು ಬರುವು ದಿನಗಳಲ್ಲಿ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಸೋಲಿನಿಂದಾಗಿ ಯಾವುದೇ ರೀತಿ ಬೇಸರವಿಲ್ಲ. ಮುಂಬರುವ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವಲ್ಲಿ ತೊಡಗಿಸಿಕೊಳ್ಳುತ್ತೇನೆ. ಪ್ರಸಕ್ತ ಚುನಾವಣೆಯಲ್ಲಿ ತಮಗೆ ಹಾಗೂ ಪಕ್ಷಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಮತದಾರರು, ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಧನ್ಯವಾದಗಳು.
- ಸಿ.ಎಂ. ಉದಾಸಿ, ಮಾಜಿ ಸಚಿವ
ಅಭಿವೃದ್ಧಿಗೆ ಮನ್ನಣೆ
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಅಭಿವೃದ್ಧಿ ವರ್ಸಸ್ ಅಪಪ್ರಚಾರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಕೊನೆಗೂ ಕ್ಷೇತ್ರದ ಮತದಾರ ಅಭಿವೃದ್ಧಿಗೆ ಮನ್ನಣೆ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ಅನುಕಂಪದ ಅಲೆಯಲ್ಲಿ ಗೆದ್ದು ಬರುತ್ತೇನೆ ಎಂಬ ಕಲ್ಪನೆಯಲ್ಲಿದ್ದರು. ಅದು ಸಾಧ್ಯವಾಗಿಲ್ಲ. ಜನರು ಅಭಿವೃದ್ಧಿಗೆ ಮತ ನೀಡಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಆದ್ದರಿಂದ ಪ್ರತಿಪಕ್ಷದಲ್ಲೇ ಕುಳಿತುಕೊಂಡೆ ನಾಡಿನ ಹಾಗೂ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಜಿಲ್ಲೆ ಬಿಜೆಪಿ ಕೈಬಿಟ್ಟು ಹೋಗಲು ಕೆಲವರು ಕೆಜೆಪಿಗೆ ಸೇರಿದ್ದೆ ಕಾರಣ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಎರಡೂ ದೊಡ್ಡ ಶಕ್ತಿಗಳಾಗಿವೆ. ಈ ಎರಡು ಶಕ್ತಿಗಳು ಒಟ್ಟಿಗೆ ಇದ್ದಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ಸಾಧ್ಯ. ಮುಂಬರುವ ದಿನಗಳಲ್ಲಿ ಬಿಎಸ್‌ವೈ ಅವರನ್ನು ಮತ್ತೆ ಬಿಜೆಪಿಯಲ್ಲೇ ಮುಂದುವರಿಯುವಂತೆ ಪ್ರಯತ್ನಿಸುತ್ತೇವೆ. ರಾಜಕೀಯದಲ್ಲಿ ಏನೂ ಬೇಕಾದರೂ ಆಗಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದೇನೆ. ಶಾಸಕ, ಸಚಿವನಾಗಿ ಹಾಗೂ ಪ್ರತಿಪಕ್ಷ ಸ್ಥಾನದಲ್ಲಿ ಜನಸೇವೆ ಮಾಡಿರುವ ಅನುಭವ ತಮಗಿದ್ದು, ಇದೇ ಅನುಭವವನ್ನು ಉಪಯೋಗಿಸಿಕೊಂಡು ಶಿಗ್ಗಾಂವಿವನ್ನು ಮಾದರಿ ಕ್ಷೇತ್ರವನ್ನಾಗಿ ಪರಿರ್ವತಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
- ಬಸವರಾಜ ಬೊಮ್ಮಾಯಿ,
ಶಿಗ್ಗಾಂವಿಯಲ್ಲಿ ಗೆದ್ದ ಅಭ್ಯರ್ಥಿ (ಬಿಜೆಪಿ)