ಭದ್ರಕೋಟೆ ಮರಳಿ ಪಡೆದ ಕಾಂಗ್ರೆಸ್
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 8
ಮೇ 5ರಂದು ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕೆಜೆಪಿ ತಲಾ ಒಂದೊಂದು ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಂಡಿದ್ದರೆ ಕಾಂಗ್ರೆಸ್ 4 ಸ್ಥಾನ ಗಳಿಸುವ ಮೂಲಕ ಬಿಜೆಪಿಯ ಭದ್ರಕೋಟೆಯಲ್ಲಿ ಕೈಬಲಪಡಿಸಿಕೊಂಡಿದೆ.
2008ರ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗೊಳಿಸುವ ಮೂಲಕ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ ಎಂಬುದನ್ನು ಸಾಬೀತುಪಡಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯನ್ನು ಜಿಲ್ಲೆಯಿಂದಲೇ ಬಗ್ಗುಬಡಿಯಬೇಕೆಂಬ ಕೆಜೆಪಿ ಉದ್ದೇಶ ಕೊನೆಗೂ ಫಲಿಸಿದಂತಾಗಿದೆ.
ಬಿಜೆಪಿ ವರ್ಸಸ್ ಕಾಂಗ್ರೆಸ್ನ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಆಯ್ಕೆಗೊಳ್ಳುವ ಮೂಲಕ ಜಿಲ್ಲೆಯ ಮಟ್ಟಿಗೆ ಕಮಲ ಪಕ್ಷದ ಮಾನ ಕಾಪಾಡಿದ್ದಾರೆ. ಇದೇ ರೀತಿಯಾಗಿ ಹಾವೇರಿಯಲ್ಲೇ ಜನ್ಮ ತಾಳಿದ್ದ ಮಾಜಿ ಸಿಎಂ ಬಿಎಸ್ವೈ ನೇತೃತ್ವದ ಕೆಜೆಪಿ ಪಕ್ಷದ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಹುರಿಯಾಳಾಗಿದ್ದ ಯು.ಬಿ. ಬಣಕಾರ ಆಯ್ಕೆಯಾಗುವ ಮೂಲಕ ಪಕ್ಷದ ಖಾತೆ ತೆರೆಯುವಂತೆ ನೋಡಿಕೊಂಡಿದ್ದಾರೆ.
ಇನ್ನುಳಿದಂತೆ ಹಾವೇರಿ (ಮೀಸಲು), ರಾಣಿಬೆನ್ನೂರು, ಬ್ಯಾಡಗಿ ಹಾಗೂ ಹಾನಗಲ್ ವಿಧಾನಸಭೆ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಹಾವೇರಿ ವಿಧಾನಸಭೆ ಸದಸ್ಯರಾಗಿ ರುದ್ರಪ್ಪ ಲಮಾಣಿ 83,119 ಮತಗಳನ್ನು ಪಡೆದಿದ್ದರೆ ಇವರ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ನೆಹರು ಓಲೇಕಾರ 52,911 ಮತಗಳನ್ನು ಪಡೆದು ಸೊಲೊಪ್ಪಿಕೊಂಡಿದ್ದಾರೆ. ಬ್ಯಾಡಗಿ ವಿಧಾನಸಭೆಗೆ ಆಯ್ಕೆಯಾಗಿರುವ ಬಸವರಾಜ ಶಿವಣ್ಣವರ 57,707 ಮತಗಳನ್ನು ಪಡೆದಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಶಿವರಾಜ ಸಜ್ಜನರ 44,348 ಮತ ಪಡೆದಿದ್ದಾರೆ. ರಾಣಿಬೆನ್ನೂರು ಮತಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ 53,780 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದರೆ, ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ 46,992 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಹಾನಗಲ್ ವಿಧಾನಸಭೆ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಸಿ.ಎಂ. ಉದಾಸಿ 60,638 ಮತಗಳನ್ನು ಪಡೆದಿದ್ದರೆ ಮನೋಹರ ತಹಸೀಲ್ದಾರ್ 66,324 ಮತಗಳನ್ನು ಪಡೆದು ವಿಜಿಯಿಯಾಗಿದ್ದಾರೆ.
ಒಟ್ಟಾರೆ ಬಿಜೆಪಿ ಭದ್ರಕೋಟೆಯಾಗಿದ್ದ ಹಾವೇರಿ ಜಿಲ್ಲೆಯಲ್ಲಿ ರಾಹುಲ್ ಮೋಡಿ ಕೆಲಸ ಮಾಡಿದೆ ಎಂಬ ಖುಷಿ ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದರೆ, ಬಿಎಸ್ವೈ ಕಡೆಗಣಿಸಿದ್ದರ ಪರಿಣಾಮ ಬಿಜೆಪಿಗೆ ಆಗಿದೆ ಎಂಬ ನೆಮ್ಮದಿ ಕೆಜೆಪಿ ಕಾರ್ಯಕರ್ತರಲ್ಲಿದ್ದಂತೆ ಕಂಡು ಬಂದಿತು. ಇನ್ನೂ ಬಿಜೆಪಿ, ಮತದಾರ ತಮ್ಮನ್ನು ಕಡಗಣಿಸಲು ಇರುವ ಕಾರಣವಾದರೂ ಏನೂ ಎಂಬ ಆತ್ಮವಲೋಕನ ಮಾಡಿಕೊಳ್ಳಲು ಮುಂದಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.