ರಾಹುಲ್ ಮೋಡಿಗೆ ಕೈ ಹಿಡಿದ ಹಾವೇರಿ
ಹಾವೇರಿ: ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸಿದಲ್ಲೆಲ್ಲ ಕಾಂಗ್ರೆಸ್ ನೆಲಕಚ್ಚಿದೆ ಎಂಬ ಪ್ರತಿಪಕ್ಷಗಳ ಟೀಕಾಸ್ತ್ರಗಳಿಗೆ ಉತ್ತರ ಎಂಬಂತೆ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ರಾಹುಲ್ ಮೋಡಿ ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ 5ರಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ನಾಯಕರು ಈ ಬಾರಿ ಒಂದೇ ಕ್ಷೇತ್ರಕ್ಕೆ ತೃಪ್ತಿಪಡಬೇಕಾಗಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿಯಲ್ಲಿ ಕೆಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ಲೆಕ್ಕಾಚಾರವೂ ತಪ್ಪಿದೆ. ನಾಲ್ವರು ಕಾಂಗ್ರೆಸ್ ಶಾಸಕರನ್ನು ಜಿಲ್ಲೆಯ ಮತದಾರರು ಆರಿಸಿ ಕಳುಹಿಸಿದ್ದಾರೆ. ಕೆಜೆಪಿಗೆ ಸಿಕ್ಕಿದ್ದು ಒಂದೇ ಕ್ಷೇತ್ರ.
ರಾಹುಲ್ ಮೋಡಿ: ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಬಿಜೆಪಿ ಆಡಳಿತದ ವಿರೋಧಿ ಅಲೆ ಕಂಡು ಬರುತ್ತಿದ್ದಂತೆಯೇ ರಾಜ್ಯ ನಾಯಕರು ರಾಹುಲ್ ಗಾಂಧಿ ಅವರನ್ನು ಜಿಲ್ಲೆಗೆ ಕರೆಯಿಸಿ ಪ್ರಚಾರ ಕಾರ್ಯ ನಡೆಸಿದ್ದು ಫಲನೀಡಿದೆ. ಯುವರಾಜನ ಪ್ರಚಾರ ಭಾಷಣವನ್ನು ಕೇಳಲು ಸಾವಿರಾರು ಜನ ಸೇರಿದ್ದರು. ಈ ಸಂದರ್ಭವನ್ನು ಸಮರ್ಪಕವಾಗಿ ಬಳಸಿಕೊಂಡ ರಾಹುಲ್, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ಜನತೆ ಮುಂದೆ ತೆರೆದಿಟ್ಟಿದ್ದರು. ಕಾಂಗ್ರೆಸ್ ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತಂದಲ್ಲಿ ಅಗ್ಗದ ಬೆಲೆಯಲ್ಲಿ ಅಕ್ಕಿ ಮುಂತಾದ ಆಹಾರ ಧಾನ್ಯ ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಘೋಷಿಸಿದ್ದರು. ಅಡುಗೆ ಅನಿಲ ಪೂರೈಕೆಯಲ್ಲಿ ಸಾಕಷ್ಟು ಅನುಕೂಲ ಕಲ್ಪಿಸಿಕೊಡುವುದಾಗಿಯೂ ಭರವಸೆ ನೀಡಿದ್ದರು.
ಮಣೆ ಹಾಕಿದ ಮತದಾರ: ರಾಹುಲ್ ಭಾಷಣದಿಂದ ಸ್ವಲ್ಪ ಮಟ್ಟಿಗೆ ನಿರಾಳ ಭಾವನೆ ತೋರ್ಪಡಿಸಿದ ಮತದಾರ, ಯುವರಾಜನಿಗೆ ಒಂದು ಚಾನ್ಸ್ ಕೊಟ್ಟು ನೋಡಬೇಕು ಎನ್ನುವಂತೆ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕೈ ಹಿಡಿದಿದ್ದಾನೆ. ರಾಹುಲ್ ಭರವಸೆಗಳು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಎಷ್ಟರ ಮಟ್ಟಿಗೆ ಜಾರಿಗೆ ಬರಲಿವೆ ಎಂಬುದು ಸದ್ಯದ ಕುತೂಹಲ.
ಸುಷ್ಮಾ-ಆಡ್ವಾಣಿ ಗೌಣ: ಜಿಲ್ಲೆಯ ಆರು ಕ್ಷೇತ್ರಗಳಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ ಹಾವೇರಿಗೆ ಆಗಮಿಸಿ ಭಾಷಣ ಮಾಡಿದರೂ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ವಿಫಲರಾದರು ಎಂಬುದಕ್ಕೆ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕೇಂದ್ರ ಸರ್ಕಾರ ನಡೆಸಿರುವ ಹಗರಣಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸಿದ್ದು ಜಿಲ್ಲೆಯ ಜನರಿಗೆ ಅಷ್ಟೇನೂ ಮನವರಿಕೆಯಾಗಲಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುವುದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದರೆ ಬಿಜೆಪಿ ಜಿಲ್ಲೆಯಲ್ಲಿ ಬಿಜೆಪಿ ಇಂಥ ಹೀನ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂದು ಬಿಜೆಪಿಯ ಕೆಲವರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೊಬ್ರಿ ಇಲ್ಲದ ಕಾಯಿ: ಕೆಜೆಪಿ ಸಂಸ್ಥಾಪಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಾವು ಅಧಿಕಾರಾವಧಿಯಲ್ಲಿ ಕೈಗೊಂಡಿರುವ ಸಾಧನೆಯನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದರೂ ಹಿರೇಕೆರೂರಲ್ಲಿ ಮಾತ್ರ ತೆಂಗಿನಕಾಯಿ ತನ್ನ ಗಟ್ಟಿತನ ಪ್ರದರ್ಶಿಸಿತು. ಬಿಎಸ್‌ವೈ ಅವರನ್ನು ಬಿಜೆಪಿಯಲ್ಲಿದ್ದಾಗ ಜನತೆ ನೋಡುತ್ತಿರುವ ರೀತಿಯೇ ಬೇರೆಯಾಗಿತ್ತು. ಕೆಜೆಪಿ ಸ್ಥಾಪನೆ ಜನತೆಯಲ್ಲೂ ಅಸಮಾಧಾನ ಮೂಡಿಸಿದೆ ಎಂಬುದು ಮತದಾರರ ಅಭಿಪ್ರಾಯ. ಜೆಡಿಎಸ್ ನೇತೃತ್ವದ ಸರ್ಕಾರ ರಚನೆಯಾದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಹಾವೇರಿಯಲ್ಲಿ ರೈತರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಆದರೂ ಎಚ್‌ಡಿಕೆ ಹೇಳಿಕೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅಲ್ಲದೆ, ಅವರನ್ನು ಹೊರತುಪಡಿಸಿ, ಜೆಡಿಎಸ್ ರಾಜ್ಯ ನಾಯಕರು ಯಾರೂ ಪ್ರಚಾರಕ್ಕೆ ಬರಲಿಲ್ಲ. ಹೀಗಾಗಿ, ಜೆಡಿಎಸ್ ಸಂಪೂರ್ಣ ನೆಲಕಚ್ಚಿತು.
ಇಬ್ಬರಿಗೆ ಮಂತ್ರಿಗಿರಿ: ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿರುವ ಕಾರಣ, ಸರ್ಕಾರ ರಚನೆ ವೇಳೆ ಜಿಲ್ಲೆಯ ಕನಿಷ್ಠ ಇಬ್ಬರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವೂ ಸಾಗಿದೆ. ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನೂ ಮೀರಿಸುವಂತೆ ಹಾವೇರಿಗೆ ಅನುದಾನದ ಹೊಳೆ ಹರಿಸಿ, ಜಿಲ್ಲೆಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಭಾರವೂ ಕಾಂಗ್ರೆಸ್ ಮೇಲಿದೆ. ರಾಹುಲ್ ಮೋಡಿ ಕಾಂಗ್ರೆಸ್ ಮುಖಂಡರಲ್ಲಿ ಸಂತಸದ ಹೊನಲು ಹರಿಸಿದೆ. ಬಿಜೆಪಿ ರಾಷ್ಟ್ರೀಯ ನಾಯಕರು ಕೇಂದ್ರ ಸರ್ಕಾರದ ಹಗರಣಗಳ ಬಗ್ಗೆ ಹೆಚ್ಚು ಮಾತನಾಡದೆ ರಾಜ್ಯದ ಮಹತ್ವದ ಯೋಜನೆಗಳನ್ನು ವಿವರಿಸಿದ್ದರೆ ಇನ್ನಷ್ಟು ಮತಗಳು ಬೀಳುತ್ತಿದ್ದವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಬಿಜೆಪಿಗೆ ಪಾಠ ಕಲಿಸುವ ಬಿ.ಎಸ್. ಯಡಿಯೂರಪ್ಪ ಕನಸು ಈಡೇರಿದ್ದರೂ ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನ ಗಳಿಸುವುದು ಅವರಿಂದಲೂ ಸಾಧ್ಯವಾಗಲಿಲ್ಲ.
-ಬಿ.ಕೆ. ಮಹೇಂದ್ರ